ವಸತಿ ಶಾಲೆಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿದ ಪ್ರಿಯಾಂಗಾ ಎಂ.! ಮಕ್ಕಳೊಂದಿಗೆ ಊಟ ಸವಿದು ಸರಳತೆ ಮೆರೆದ ಸಿಇಒ.!

ಮುಂಡಗೋಡ: ತಾಲೂಕಿನ ಇಂದಿರಾಗಾಂಧಿ ವಸತಿ ಶಾಲೆಗೆ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಈ ಹಿಂದೆ ತಾಲೂಕಿನ ಮಳಗಿ ಗ್ರಾಮದಲ್ಲಿ ಅವ್ಯವಸ್ಥೆ ಗಳಿಂದ ಕೂಡಿದ್ದ ವಸತಿ ಶಾಲೆಯನ್ನು ಕಳೆದ ಒಂದೂವರೆ ತಿಂಗಳ ಹಿಂದೆ ಪಟ್ಟಣದ ಬೃಂದಾವನ ಕಾಲನಿಯಲ್ಲಿ ಇರುವ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಈ ಶಾಲೆಗೆ ಜಿ.ಪಂ.ಸಿಇಒ ಅಧಿಕಾರಿಗಳ ತಂಡ ಭೇಟಿ ನೀಡಿ ವಸತಿ ಶಾಲೆಯ ಪ್ರತಿಯೊಂದು ಕೊಠಡಿಗಳನ್ನು ಪರಿಶೀಲಿಸಿ ಪ್ರಾಂಶುಪಾಲರಿಂದ ಮಾಹಿತಿ ಪಡೆದರು.

ಅಡುಗೆ ಕೊಠಡಿಗೆ ಹೋಗಿ ಪರಿಶೀಲಿಸಿದ ಅವರು ನಂತರ ಮಕ್ಕಳೊಂದಿಗೆ ಪ್ರಾರ್ಥನೆ ಸಲ್ಲಿಸಿ ಮಧ್ಯಾಹ್ನದ ಊಟವನ್ನು ಸೇವಿಸಿದರು. ಈ ವೇಳೆ ಊಟದ ವ್ಯವಸ್ಥೆ ಬಗ್ಗೆ ಮಕ್ಕಳೊಂದಿಗೆ ವಿಚಾರಣೆ ನಡೆಸಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪ್ರತಿ ತಿಂಗಳು ಭೇಟಿ ನೀಡುವಂತೆ ಈ ಬಾರಿಯೂ ತಾಲೂಕಿನ ಕೋಡಂಬಿ ಮತ್ತು ಹನುಮಾಪುರ ಗ್ರಾ.ಪಂ.ವ್ಯಾಪ್ತಿಯಲ್ಲಿ ಜೆಜಎಂ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಡೆದಿರುವ ಕಾಮಗಾರಿಗಳ ಪರಿಶೀಲನೆ ನಡೆಸಲಾಯಿತು.

ಮೊದಲು ಮಳಗಿಯಲ್ಲಿ ತೀರಾ ಹದಗೆಟ್ಟ ಪರಿಸ್ಥಿತಿಯಲ್ಲಿ ಇದ್ದ ವಸತಿ ಶಾಲೆಯನ್ನು ಸ್ಥಳಾಂತರಿಸಲಾಗಿದೆ. ನೂತನ ಕಟ್ಟಡದ ಬಾಡಿಗೆ ಕರಾರು ಪತ್ರ ಮಾಡುವುದು ಬಾಕಿ ಇದೆ. ಸಿಸಿ ಕ್ಯಾಮರಾ ಅಳವಡಿಸಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಸತಿ ಶಾಲೆಯ ಪ್ರಾಂಶುಪಾಲರ ಬಗ್ಗೆ ಕೆಲವು ದೂರುಗಳನ್ನು ಮಾಧ್ಯಮದವರು ಅವರ ಗಮನಕ್ಕೆ ತಂದಾಗ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ತಿಳಿಸಿದರು.

ಈ ವೇಳೆ ತಾಲೂಕು ಪಂಚಾಯಿತಿ ಇಒ ಪ್ರವೀಣ ಕಟ್ಟಿ, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಟಿ.ವೈ.ದಾಸನಕೊಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಪವಾರ, ಬಿಸಿಎಂ ಇಲಾಖೆ ಅಧಿಕಾರಿ ಸುಜಾತಾ ಹಂಜಿ ಮತ್ತು ವಸತಿ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.