ಖಾಲಿ ಬಾಟಲಿಗಳ ಮಧ್ಯೆ ಅಕ್ರಮ ಗೋವಾ ಮದ್ಯ ಸಾಗಾಟ.! ಲಕ್ಷಾಂತರ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು.!

ಕಾರವಾರ: ಸ್ಕ್ರ್ಯಾಪ್ ಖಾಲಿ ಬಾಟಲಿಗಳು ತುಂಬಿದ್ದ ಲಾರಿಯಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿ ಲಕ್ಷಾಂತರ ರೂ. ಸ್ವತ್ತನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಮಾಜಾಳಿ ತನಿಖಾ ಠಾಣೆಯಲ್ಲಿ ಮಂಗಳವಾರ ನಡೆದಿದೆ.

ತೆಲಂಗಾಣ ರಾಜ್ಯದ ವಾರಂಗಲ್ ನಿವಾಸಿ ಬನುಪಟಿ ಜಗನ್ ಮೋಹನ್ ರಾಮನ್ ಪೆಟ್ ಎಂಬಾತ ಬಂಧಿತ ಆರೋಪಿ. ಖಚಿತ ಮಾಹಿತಿಯ ಮೇರೆಗೆ ಮಾಜಾಳಿ ತನಿಖಾ ಠಾಣೆಯಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು ಗೋವಾದಿಂದ ಕರ್ನಾಟಕದತ್ತ ಆಗಮಿಸುತ್ತಿದ್ದ ಈಚರ್ ಲಾರಿಯನ್ನು ತಡೆದು ತಪಾಸಣೆ ನಡೆಸಿದ್ದಾರೆ.

ಈ ವೇಳೆ 44,000 ರೂ. ಬೆಲೆಯ ಖಾಲಿ ಸ್ಕ್ರ್ಯಾಪ್ ಬಾಟಲಿಗಳ ಮಧ್ಯದಲ್ಲಿ 6,34,000 ರೂ. ಮೌಲ್ಯದ 474 ಲೀಟರ್ ಗೋವಾ ಮದ್ಯ ಹಾಗೂ 7,200 ರೂ. ಮೌಲ್ಯದ 18 ಲೀ. ಗೋವಾ ಪೆನ್ನಿ ಪತ್ತೆಯಾಗಿದೆ.ತಕ್ಷಣ ಆರೋಪಿಯನ್ನು ಹಾಗೂ 10 ಲಕ್ಷ ರೂ. ಮೌಲ್ಯದ ಲಾರಿಯೊಂದಿಗೆ ಒಟ್ಟೂ 16.86 ಲಕ್ಷ ರೂ. ಸ್ವತ್ತುಗಳನ್ನು ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಆದೇಶ ಹಾಗೂ ಉತ್ತರ ಕನ್ನಡ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಉಪವಿಭಾಗದ ಕಾರವಾರ ವಲಯದ ನಿರೀಕ್ಷಕರ ಜಿಲ್ಲಾ ತಂಡ ಹಾಗೂ ಅಬಕಾರಿ ತನಿಖಾ ಠಾಣೆ ಅಧಿಕಾರಿಗಳು, ಸಿಬ್ಬಂದಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದರು ಎಂದು ಉತ್ತರ ಕನ್ನಡ ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ. ತಿಳಿಸಿದ್ದಾರೆ.