ಶಿರಸಿ: ಮುಂಬರುವ ಅಧಿವೇಶನದಲ್ಲಿ ಅರಣ್ಯ ಅತಿಕ್ರಮಣದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪೂರ್ಣ ಪ್ರಮಾಣದ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿ ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆಯಿಂದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯಲಾಗಿದೆ.
ಪತ್ರದ ಪ್ರತಿಯನ್ನು ಮಂಗಳವಾರ ಬಿಡುಗಡೆ ಮಾಡಿರುವ ರವೀಂದ್ರ ನಾಯ್ಕ್, ಅರಣ್ಯ ಹಕ್ಕು ಕಾಯ್ದೆ ಇದುವರೆಗೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಅತಿಕ್ರಮಣದಾರರ ಅರ್ಜಿ ತಿರಸ್ಕಾರವಾಗಿರುವ ಪ್ರಮಾಣವೇ ಜಾಸ್ತಿ ಇದೆ. ಅಲ್ಲದೇ ಅತಿಕ್ರಮಣದಾರರ ಮುಂದಿನ ಭವಿಷ್ಯಕ್ಕೆ ಆತಂಕ ಉಂಟಾಗಿದೆ. ಇನ್ನೊಂದೆಡೆ ಅತಿಕ್ರಮಣದಾರರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ನಡೆಸುತ್ತಿದೆ. ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಅವಲಂಬಿತರ ಪರವಾಗಿ ವಿಧಾನ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.