ಲಕ್ಷಾಂತರ ರೂಪಾಯಿ ವ್ಯಯಿಸಿ ರಸ್ತೆ ನಿರ್ಮಾಣ.! ವರ್ಷದೊಳಗೇ ಕಿತ್ತುಹೋದ ಡಾಂಬರು.! ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ.!

ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಜಲಾಶಯದ ರಸ್ತೆಯನ್ನು ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಾಣ ಮಾಡಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆಯುವುದರ ಒಳಗೇ ರಸ್ತೆಯ ಡಾಂಬರು ಕಿತ್ತುಹೋಗಿದ್ದು, ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.

ಕಳಪೆ ಗುಣಮಟ್ಟದ ಕಾಮಗಾರಿ.!

ನ್ಯಾಸರ್ಗಿ ಜಲಾಶಯದ ರಸ್ತೆ ನಿರ್ಮಾಣದ ಕಾಮಗಾರಿ ಇದಾಗಿದ್ದು, ವಿವಿಧ ಗ್ರಾಮಗಳಿಗೆ ಹಾಗೂ ಶಿಗ್ಗಾಂವಿ ತಾಲೂಕಿಗೆ ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಲೋಕೋಪಯೋಗಿ ಇಲಾಖೆಯವರು ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಈ ರಸ್ತೆ ಕಾಮಗಾರಿಯು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.

ವರ್ಷದೊಳಗೆ ಡಾಂಬರು ರಸ್ತೆ ಮಾಯ.!

ಸದ್ಯ ಮಾಡಿರುವ ರಸ್ತೆ ಕಾಮಗಾರಿ ಒಂದು ವರ್ಷದೊಳಗೇ ಡಾಂಬರು ರಸ್ತೆ ಕಿತ್ತು ಹೋಗಿ ಬೃಹತ್ ಆಕಾರದ ಗುಂಡಿಗಳು ಬಿದ್ದಿದೆ. ರಸ್ತೆ ನಿರ್ವಹಣೆ ಮಾಡಲು ಸರ್ಕಾರದಿಂದ ಲಕ್ಷಾಂತ ರೂಪಾಯಿ ಅನುದಾನದ ಹಣ ಬಿಡುಗಡೆ ಆಗುತ್ತದೆ. ಆದರೆ ಅಧಿಕಾರಿಗಳು ಮಾತ್ರ ಸರಿಯಾದ ಗುಣಮಟ್ಟದ ರಸ್ತೆ ಮತ್ತು ನಿರ್ವಹಣೆ ಮಾಡದೆ ಉದಾಸೀನತೆ ತೋರುತ್ತಿರುವುದು ವಿಪರ್ಯಾಸವಾಗಿದೆ. ಅಲ್ಲದೆ ಗ್ರಾಮಸ್ಥರು ರಸ್ತೆಯಲ್ಲಿ ನೀರು ತುಂಬಿದ ಗುಂಡಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವಂತೆ ರಸ್ತೆಯಲ್ಲಿ ನಿಂತು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ಸರ್ಕಾರದ ಕೋಟ್ಯಾಂತರ ರೂಪಾಯಿ ಪೋಲು.!

ಕೆಲವು ವರ್ಷಗಳಿಂದ ತಾಲೂಕಿನ ಕೆಲವೆಡೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಮಾಡಿದ್ದ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿ ಸರ್ಕಾರದ ಕೊಟ್ಯಾಂತರ ಹಣ ಪೋಲಾಗಿದೆ ಎಂಬ ಆರೋಪವು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ.!

ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನಹರಿಸಿ ತಾಲೂಕಿನ ಕೆಲವು ಕಡೆ ಮಾಡಿದ ರಸ್ತೆ ಕಾಮಗಾರಿಗಳು ಕಿತ್ತು ಹೊಂಡಗಳು ಬೀಳುತ್ತಿದ್ದು ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸರ್ಕಾರದ ಪೋಲಾದ ಹಣವನ್ನು ಅವರಿಂದ ಸರ್ಕಾರಕ್ಕೆ ಭರಣ ಮಾಡಿಸಬೇಕಿದೆ. ಕಳಪೆ ಕಾಮಗಾರಿಗೆ ಸಾರ್ವಜನಿಕರು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ. ವಾಹನ ಚಾಲಕರು ಹಾಗೂ ಬೈಕ್ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಸವಾರಿ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.

ಸಾರ್ವಜನಿಕರಿಗೆ ತೊಂದರೆ ಆಗದಂತೆ ಮತ್ತು ಸುಗುಮ ಸಂಚಾರಕ್ಕೆ ಅನುವು ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಕಾಮಗಾರಿಯಾದ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಗುಂಡಿಗಳಿಂದ ಸವಾರರಿಗೆ ತೊಂದರೆ ಆಗುತ್ತಿರುವುದನ್ನು ನೋಡಿ ಗುಂಡಿಯನ್ನು ಮುಚ್ಚಿಸಲು ತಿಳಿಸಲಾಗಿದೆ.

– ಮಹಾದೇವ ಹ್ಯಾಟಿ, ಪಿಡಬ್ಲ್ಯುಡಿ ಎಇಇ