ಕಾರವಾರ: ಪ್ರತಿ ಭಾನುವಾರ ನಗರದಲ್ಲಿ ನಡೆಯುತ್ತಿದ್ದ ವಾರದ ಸಂತೆಗೆ ಈ ಬಾರಿ ಶನಿವಾರ ಅವಕಾಶ ನೀಡಲಾಗಿದ್ದು, ಬರುತ್ತಿರುವ ಬೆರಳೆಣಿಕೆಯಷ್ಟು ಮಾತ್ರ ಗ್ರಾಹಕರಿಂದಾಗಿ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.
ಸೆ. 4 ರಂದು ಭಾನುವಾರ ನ್ಯಾಯಾಧೀಶರ ಕ್ಲಸ್ಟರ್ ಮಟ್ಟದ ತರಬೇತಿ ಶಿಬಿರವನ್ನು ಕಾರವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದ ಸಂತೆಯನ್ನು ಶನಿವಾರವೇ ನಡೆಸಲು ನಗರಸಭೆ ಅವಕಾಶ ಮಾಡಿಕೊಟ್ಟಿದೆ. ಈ ಬಗ್ಗೆ ವಾರದ ಹಿಂದೆಯೇ ಪ್ರಕಟಣೆಯನ್ನೂ ನೀಡಿ ಭಾನುವಾರ ಯಾವುದೇ ಕಾರಣಕ್ಕೆ ಸಂತೆ ನಡೆಸಲು ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿತ್ತು.
ಹೀಗಾಗಿ ಶನಿವಾರವೇ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ವಿವಿಧ ತರಕಾರಿ, ದಿನಸಿ ಸಾಮಾನುಗಳ ವ್ಯಾಪಾರಸ್ಥರು ಆಗಮಿಸಿ ನಗರದ ಎಂ. ಜಿ. ರಸ್ತೆ, ಪಿಕಳೆ ರಸ್ತೆ, ಸಿವಿಲ್ ಕೋರ್ಟ್ ರಸ್ತೆ ಸೇರಿದಂತೆ ಎಲ್ಲಡೆ ತಮ್ಮ ಬೀದಿ ಅಂಗಡಿಗಳನ್ನು ತೆರೆದು ವ್ಯಾಪಾರ ಆರಂಭಿಸಿದ್ದಾರೆ. ಆದರೆ ಭಾನುವಾರ ಬೆಳಿಗ್ಗೆಯಿಂದಲೇ ಜನದಟ್ಟಣೆಯಲ್ಲಿರುತ್ತಿದ್ದ ಸಂತೆಯು ಶನಿವಾರ ರಜಾ ದಿನವಲ್ಲದ್ದರಿಂದ ಕೆಲವೇ ಕೆಲವು ಗ್ರಾಹಕರು ಮಾತ್ರ ಖರೀದಿಗೆ ಬಂದಿದ್ದಾರೆ. ಹೀಗಾಗಿ ವ್ಯಾಪಾರಿಗಳು ಖಾಲಿ ಕುಳಿತುಕೊಳ್ಳಬೇಕಾದ ಪ್ರಸಂಗ ಎದುರಾಗಿದೆ.
ಕೆಲಸಕ್ಕೆ ಹೋಗುವವರು ಯಾರೂ ಈ ಸಮಯದಲ್ಲಿ ಸಂತೆಗೆ ಬರುವುದಿಲ್ಲ. ಸಾಯಂಕಾಲ ದುಡಿಮೆ ಮುಗಿದ ಬಳಿಕವಾದರೂ ಹೆಚ್ಚಿನ ಗ್ರಾಹಕರು ಬರಬಹುದು ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ವ್ಯಾಪಾರಿಗಳು ಹೇಳಿಕೊಂಡಿದ್ದಾರೆ.