ಮಂಗಳೂರು: ಪ್ರಧಾನಿ ಮೋದಿ ಇಂದು ಕೇರಳದಿಂದ ಮಂಗಳೂರಿಗೆ ಆಗಮಿಸಲಿದ್ದಾರೆ. ಮೋದಿಯವರನ್ನ ಸ್ವಾಗತಿಸಲು ಮಂಗಳೂರು ನಗರ ಸಜ್ಜಾಗಿದೆ. ಸುಮಾರು 3,800 ಕೋಟಿ ವೆಚ್ಚದ 8 ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮ ನಡೆಯಲಿರುವ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಮೋದಿ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು, ಕೃಷಿ ಸಮ್ಮಾನ್, ವಿದ್ಯಾನಿಧಿ ಸೇರಿ ಹಲವು ಫಲಾನುಭವಿಗಳು ಭಾಗಿಯಾಗಲಿದ್ದಾರೆ. ಮತ್ತು ಭಾರತ ನಿರ್ಮಿಸಿದ ಐಎನ್ಎಸ್ ವಿಕ್ರಾಂತ್ ಯುದ್ಧ ಹಡಗನ್ನು ನಾಡಿಗೆ ಸರ್ಮಪಿಸಲಿದ್ದಾರೆ.
ಕೊಚ್ಚಿಯಿಂದ 1 ಗಂಟೆಗೆ ಆಗಮಿಸಲಿರುವ ಪ್ರಧಾನಿ ಮೋದಿ ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಕೂಳೂರು ಬಳಿ ನಿರ್ಮಿಸಿರುವ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದು, ನಂತರ ಗೋಲ್ಡ್ ಫಿಂಚ್ ಆವರಣಕ್ಕೆ ಬರಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಎಸ್ಪಿಜಿ ಅಧಿಕಾರಿಗಳು ಈಗಾಗಲೇ ವೇದಿಕೆಯ ಭದ್ರತೆ ಪರಿಶೀಲನೆ ಮಾಡಿದ್ದು, ಕಾರ್ಯಕ್ರಮದ ವೇದಿಕೆ ಸುತ್ತ ತಡೆ ಬೇಲಿ ಹಾಕಿ ಭದ್ರತೆ ಹಾಕಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ 1 ಲಕ್ಷಕ್ಕೂ ಅಧಿಕ ಜನ ಆಗಮಿಸುವ ನಿರೀಕ್ಷೆ ಇದೆ. ಸಿಗರೇಟ್, ಲೈಟರ್, ಬೆಂಕಿಪೊಟ್ಟಣ, ಕಪ್ಪು ಬಾವುಟ ಸೇರಿದಂತೆ ಅಪಾಯಕಾರಿ ಮತ್ತು ಅಹಿತಕರ ಎಂದು ಸಂದೇಹ ಬರುವ ಯಾವ ವಸ್ತುಗಳನ್ನೂ ಒಳಗೆ ತೆಗೆದುಕೊಂಡ ಹೋಗಲು ಬಿಡದಂತೆ ಅಧಿಕಾರಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಹಾಗೂ ಆಯುಷ್ ಸಚಿವ ಸರ್ಬಾನಂದ್ ಸೊನೊವಾಲ್, ಕೇಂದ್ರ ಇಂಧನ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ರಾಜ್ಯ ಸಚಿವ ಶಂತನು ಠಾಕೂರ್ ಸೇರಿದಂತೆ ರಾಜ್ಯದ ಸಚಿವರು ಸಹ ಭಾಗವಹಿಸಲಿದ್ದಾರೆ.