ಮುಂಡಗೋಡ: ತಾಲೂಕಿನ ಚಳಗೇರಿ ಗ್ರಾಮದ ಯುವತಿ ನಯನಾ ಬೆಂಗಳೂರಿನಲ್ಲಿ ನಡೆದ ರಾಜ್ಯ ಜೂನಿಯರ್ ಮತ್ತು ಸೀನಿಯರ್ 200 ಮೀಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಧನಗರ ಗೌಳಿ ಕುಟುಂಬದ ನಯನಾ ಕೊಕರೆ ಬಂಗಾರದ ಪದಕ ಗೆದ್ದವಳಾಗಿದ್ದಾಳೆ. ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ರವಿವಾರ ನಡೆದ 200 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದು, ಸೆ. 9-11 ರವರೆಗೆ ಆಂಧ್ರ ಪ್ರದೇಶದಲ್ಲಿ ನಡೆಯುವ ನ್ಯಾಷನಲ್ ಅಥ್ಲೆಟಿಕ್ಸ್ ಗೆ ಆಯ್ಕೆಯಾಗಿದ್ದಾಳೆ.
ನಯನಾ ದ್ವಿತೀಯ ಪಿಯುಸಿ ಓದುತ್ತಿದ್ದು, ಬ್ರಿಜಸ್ ಆಫ್ ಸ್ಪೋರ್ಟ್ಸ್ ನಿಂದ ತರಬೇತಿ ಪಡೆಯುತ್ತಿದ್ದಾಳೆ. ಈ ಹಿಂದೆ ನಯನಾ 2021 ರ ಅಕ್ಟೋಬರ್ 11 ರಂದು ದೆಹಲಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ 3 ನೇ ನ್ಯಾಷನಲ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿ 400 ಮೀ. ಓಟದ ಸ್ಫರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ, ಜಿಲ್ಲೆ ಮತ್ತು ತಾಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಳು.
ದಟ್ಟ ಅಡವಿಯಲ್ಲಿ ವಾಸಿಸುವ ದನಗರ ಗೌಳಿ ಜನಾಂಗದ ಗಂಗಾರಾಮ ಕೊಕರೆ ಮತ್ತು ಗಂಗುಬಾಯಿ ದಂಪತಿಯ ಪುತ್ರಿ ನಯನಾ. ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಚಳಗೇರಿಯಲ್ಲಿ ಮುಗಿಸಿದರು. ಕಾತೂರಿನ ಪ್ರೌಢಶಾಲೆಯಲ್ಲಿ 8 ಮತ್ತು 9 ನೇ ತರಗತಿವರೆಗೆ ವ್ಯಾಸಂಗ ಮಾಡಿ ನಂತರ ಲೊಯೋಲ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಯನ್ನು ಮುಗಿಸಿದರು. 7 ನೇ ತರಗತಿಯಲ್ಲಿದ್ದಾಗ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ 100 ಮೀ., 200 ಮೀ., ಮತ್ತು 400 ಮೀ. ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. 10 ನೇ ತರಗತಿಯಲ್ಲಿ ಓದುತ್ತಿರುವಾಗ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ 4 ನೇ ಸ್ಥಾನ ಪಡೆದಿದ್ದಾರೆ. ಬಾಲ್ಯದಿಂದಲೂ ಅಥ್ಲೆಟಿಕ್ಸ್ ನಲ್ಲಿ ತುಂಬಾ ಆಸಕ್ತಿ ಹೊಂದಿದ ನಯನಾ ತಂದೆ-ತಾಯಿ ಕಷ್ಟದಲ್ಲಿಯೂ ಸಹ ಅವಳಿಗೆ ಆತ್ಮ ಸ್ಥೈರ್ಯ ತುಂಬುತ್ತಾ ಬಂದಿದ್ದಾರೆ.
ಅಥ್ಲೆಟಿಕ್ ಕ್ಷೇತ್ರದಲ್ಲಿ ಗೌಳಿ ಕುಟುಂಬದ ನಯನಾ ಕೊಕರೆ ಉತ್ತಮ ಸಾಧನೆ ಮಾಡುತ್ತಿದ್ದಾಳೆ. ಇನ್ನೂ ಹೆಚ್ಚಿನ ಸಾಧನೆ ಮಾಡಿ ತಮ್ಮೂರಿನ ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಸಲಿ. ಮುಂದಿನ ಅವಳ ಕ್ರೀಡಾ ಭವಿಷ್ಯಯೂ ಉಜ್ವಲವಾಗಲಿ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಶುಭ ಹಾರೈಸಿದ್ದಾರೆ..