ಅಪೂರ್ಣ ಚತುಷ್ಪಥ ಕಾಮಗಾರಿಯಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸುವಂತೆ ಶಾಸಕರಿಗೆ ಮನವಿ

ಕುಮಟಾ: ತಾಲೂಕಿನ ಕಲಭಾಗ ಗ್ರಾ.ಪಂ ವ್ಯಾಪ್ತಿಯಲ್ಲಿ ಅಪೂರ್ಣಗೊಂಡ ಚತುಷ್ಪಥ ಕಾಮಗಾರಿಯಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸಿಕೊಡುವಂತೆ ಒತ್ತಾಯಿಸಿ ಆ ಭಾಗದ ಗ್ರಾಮಸ್ಥರು ಹಾಗೂ ಪಂಚಾಯತ ಪ್ರತಿನಿಧಿಗಳು ಸಾಮಾಜಿಕ ಕಾರ್ಯಕರ್ತ ಅರವಿಂದ ಪೈ ನೇತೃತ್ವದಲ್ಲಿ ಶುಕ್ರವಾರ ಶಾಸಕ ದಿನಕರ ಶೆಟ್ಟಿ ಮತ್ತು ಉಪವಿಭಾಗಾಧಿಕಾರಿ ರಾಘವೇಂದ್ರ ಕೆ ಅವರಿಗೆ ಮನವಿ ನೀಡಿ ಆಗ್ರಹಿಸಿದರು.

ಕಳೆದ 10 ವರ್ಷಗಳಿಂದ ಈ ಭಾಗದಲ್ಲಿ ಚತುಷ್ಪಥ ಕಾಮಗಾರಿ ನಡೆಯತ್ತಿದ್ದು, ಈ ವರೆಗೆ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ. ಹೆದ್ದಾರಿ ಅಂಚಿನ ಗಟಾರ ಕಾಮಗಾರಿ ಅಪೂರ್ಣವಾಗಿದೆ. ಬೀದಿ ದೀಪಗಳನ್ನು ಸಹ ಸಮರ್ಪಕವಾಗಿ ಅಳವಡಿಕೆ ಮಾಡಿಲ್ಲ. ನೀರಿನ ಪೈಪ್‌ಲೈನ್ ಸೇರಿದಂತೆ ಹಲವು ಸಮಸ್ಯೆಗಳಿವೆ. ಹೀಗಾಗಿ ನಮ್ಮ ಭಾಗದಲ್ಲಾದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸೆಪ್ಟೆಂಬರ್ 15 ರಂದು ಕಲಭಾಗ ಗ್ರಾ.ಪಂ ಕಚೇರಿ ಸಮೀಪದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಕಲಭಾಗ ಗ್ರಾಪಂ ಅಧ್ಯಕ್ಷೆ ಗೀತಾ ಜೈವಿಠಲ ಕುಬಾಲ್, ಕಲಭಾಗ ಗ್ರಾಪಂ ಉಪಾಧ್ಯಕ್ಷ ಮಂಜುನಾಥ ನಾಯ್ಕ, ಸದಸ್ಯರಾದ ವಿರೂಪಾಪಕ್ಷ ನಾಯ್ಕ, ಲಿಂಗಪ್ಪ ನಾಯ್ಕ ಸೇರಿದಂತೆ ಇತರರಿದ್ದರು.