ಬೇಸಿಗೆಯಲ್ಲಿ ಹಾಕಿದ ಮಣ್ಣು ಮಳೆಗಾಲದಲ್ಲಿ ತೆಗೆದರು.! ಮುಂದಾಲೋಚನೆ ಇಲ್ಲದೇ ಎಡವಟ್ಟಾದ ರಸ್ತೆ ದುರಸ್ತಿ ಪ್ರಸಂಗ.!

ಯಲ್ಲಾಪುರ: ರಸ್ತೆ ಕಾಮಗಾರಿಯನ್ನು ಮುಂದಾಲೋಚನೆ ಇಲ್ಲದೇ ಮಾಡಿದರೆ ಏನೆಲ್ಲಾ ಎಡವಟ್ಟಾಗುತ್ತದೆ ಎಂಬುದಕ್ಕೆ ಈ ಪ್ರಸಂಗ ಉದಾಹರಣೆಯೆಂಬಂತಿದೆ. ಹೌದು.! ಬೇಸಿಗೆಯಲ್ಲಿ ರಸ್ತೆಗೆ ವ್ಯಾಪಕವಾಗಿ ಹಾಕಿದ್ದ ಮಣ್ಣನ್ನು ಮಳೆಗಾಲದಲ್ಲಿ ಜನ ಓಡಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ತೆರವುಗೊಳಿಸಿರುವ ಪ್ರಸಂಗ ಚಂದಗುಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದಿದೆ.‌

ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಹುತ್ಕಂಡ ಭಾಗದ ಜೂಜನಬೈಲ್ ಶಾಲೆಯಿಂದ, ಕುಂಬಾರಮತ್ತಿ ರಸ್ತೆಗೆ ಬೇಸಿಗೆಯಲ್ಲಿ ಮಣ್ಣು ಹಾಕಲಾಗಿತ್ತು. ಇದೀಗ ಮಳೆಯ ಕಾರಣ ರಸ್ತೆ ಪೂರ್ಣ ರಾಡಿಯಾಗಿದ್ದು, ಓಡಾಡಲು ಸಾಧ್ಯವಾಗದೇ ಹಾಕಿದ ಮಣ್ಣನ್ನು ಜೆಸಿಬಿ ಬಳಸಿ ತೆಗೆಯಲಾಗುತ್ತಿದೆ. ಗ್ರಾಮಸ್ಥರೇ ಸಲಕೆ ಹಿಡಿದು ಅಳಿದುಳಿದ ಭಾಗವನ್ನು ಸರಿಪಡಿಸುತ್ತಿದ್ದಾರೆ.

ಸಾಮಾನ್ಯವಾಗಿ ಕಚ್ಚಾರಸ್ತೆಗೆ ಖಡಿ ಮತ್ತು ಗಟ್ಟಿ ಮಣ್ಣನ್ನು ಬಳಸಲಾಗುತ್ತದೆ. ಆದರೆ ಇಲ್ಲಿ ರಸ್ತೆಗೆ ಜೇಡಿ ಮಣ್ಣನ್ನು ಬಳಸಲಾಗಿತ್ತು. ಹೀಗಾಗಿ ಮಳೆಗಾಲದಲ್ಲಿ ವಾಹನ ಸಂಚರಿಸುವುದಿರಲಿ ಪಾದಚಾರಿಗಳೂ ತಿರುಗಾಡಲು ಸಾಧ್ಯವಾಗದಷ್ಟು ಕೆಸರು ರಾಡಿಯಾಗಿತ್ತು. ಇನ್ನು ಸಂಚರಿಸಲು ಸಾಧ್ಯವೇ ಆಗದಾಗ ಮಣ್ಣು ಖುಲ್ಲಾಪಡಿಸುವುದು ಅನಿವಾರ್ಯವಾಯಿತು. ಆದರೆ ಸರ್ಕಾರಿ ಕಾಮಗಾರಿಯ ಈ ಎಡವಟ್ಟಿಗೆ ಮಾತ್ರ ಗ್ರಾಮಸ್ಥರು ಆಡಿಕೊಳ್ಳುವಂತಾಗಿದೆ.