ಮುಂಡಗೋಡ: ಸತತ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ತಾಲೂಕಿನ ಬೆಡಸಗಾಂವ ವ್ಯಾಪ್ತಿಯಲ್ಲಿ ಅಡಿಕೆ ಬೆಳೆಗೆ ಕೊಳೆರೋಗ ಕಾಣಿಸಿಕೊಂಡು ಅಡಿಕೆ ಉದುರಿ ಬೀಳುತ್ತಿದೆ. ಇದರಿಂದ ಬೆಳೆಗಾರರಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ತಾಲೂಕಿನ ಗಡಿ ಭಾಗವಾದ ಬೆಡಸಗಾಂವ, ಕೂರ್ಲಿ ತೋಗ್ರಳ್ಳಿ, ಅಟಬೈಲ್, ಹೊಸ್ತೋಟ್, ಉಮ್ಮಚ್ಚಗಿ, ಶ್ಯಾನವಳ್ಳಿ, ಬೆಕ್ಕೋಡ್, ಕಾಳೇಬೈಲ ಬಾಳೆಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಡಿಕೆ ಬೆಳೆಗಳಿಗೆ ಕೊಳೆ ರೋಗ ಕಾಣಿಸಿಕೊಂಡು ಕೋಟ್ಯಾಂತರ ರೂಪಾಯಿ ಅಡಿಕೆ ಬೆಳೆ ಹಾನಿಯಾಗಿದೆ. ಮಾಹಿತಿ ಪಡೆದ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಅಣ್ಣಪ್ಪ ನಾಯ್ಕ ಸ್ಥಳಕ್ಕೆ ಭೇಟಿ ಮಾಡಿ ಬೆಳೆಗಾರರಿಗೆ ಸಲಹೆ ಸೂಚನೆ ನೀಡಿದ್ದಾರೆ.
ಕೆಲ ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಅಪಾರ ಪ್ರಮಾಣದ ಕೊಯ್ಲಿಗೆ ಬಂದ ಅಡಿಕೆಗೆ ಕೊಳೆ ರೋಗ ಕಾಣಿಸಿಕೊಂಡು ಗಾಳಿಗೆ ಉದುರಿ ಬೀಳುತ್ತಿದೆ. ತುತ್ತ, ಸುಣ್ಣ ಸೇರಿಸಿ ಬೆಳೆಗೆ ಹೊಡೆದರು ಏನು ಪ್ರಯೋಜನವಾಗಿಲ್ಲ. ಇನ್ನು ಕೆಲವರು ಕೀಟನಾಶಕ ಉಪಯೋಗಿಸಿದ್ದು, ಯಾವುದೇ ಉಪಯೋಗವಾಗಿಲ್ಲ. ಜಿಟಿ ಜಿಟಿ ಮಳೆ ಬಿಳ್ಳುತ್ತಿರುವುದರಿಂದ, ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹರಡುತ್ತಿದೆ.
ಪ್ರತಿ ವರ್ಷವೂ ಕೊಳೆ ರೋಗದಿಂದ ಹಾನಿಯಾಗುತ್ತಿದ್ದು, ಈ ವರ್ಷ ಗ್ರಾ.ಪಂ ವ್ಯಾಪ್ತಿಯಲ್ಲಿ 180 ಎಕರೆಯಷ್ಟು ಅಡಿಕೆ ಬೆಳೆಯಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ. ಕ್ವಿಂಟಲ್‌ಗೆ 5 ಸಾವಿರ ಇರುವ ಅಡಿಕೆಗೆ ಕೊಳೆ ರೋಗ ಕಾಣಿಸಿಕೊಂಡಿರುವುದರಿಂದ 1 ರಿಂದ 2 ಸಾವಿರಕ್ಕೆ ವ್ಯಾಪಾರಸ್ಥರು ಕೇಳುತ್ತಿದ್ದಾರೆ. ಪ್ರಕೃತಿ ವಿಕೋಪದಿಂದ ಆದ ನಷ್ಟಕ್ಕೆ ಸರಕಾರ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಬೆಡಸಗಾಂವ ಗ್ರಾಮದ ಅಡಿಕೆ ಬೆಳೆಗಾರ ದೇವೇಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಅಣ್ಣಪ್ಪ ನಾಯ್ಕ ಮಾತನಾಡಿ, ಈ ವರ್ಷ ಬಹಳ ಮಳೆಯಾದ್ದರಿಂದ ಬೆಡಸಗಾಂವ ವ್ಯಾಪ್ತಿಯಲ್ಲಿ ಹೆಚ್ಚು ಕೊಳೆರೋಗ ಕಾಣಿಸಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಸುಮಾರು 10 ಅಡಿಕೆ ತೋಟಗಳಿಗೆ ಹೋಗಿ ಪರಿಶಿಲಿಸಿದ್ದೇನೆ. ಅಲ್ಲದೆ ಕೊಳೆ ರೋಗದಿಂದ ಬಿದ್ದ ಅಡಿಕೆಗಳನ್ನು ಸ್ವಚ್ಚಗೊಳಿಸುವುದು ಹೇಗೆ ಮತ್ತು ಬೋರ್ಡೋ ಮಿಶ್ರಣಗಳನ್ನು ಸಿಂಪಡಿಸಲು ರೈತರಿಗೆ ಸಲಹೆ ನೀಡಿದ್ದೇನೆ. ದ್ರಾವಣ ತಯಾರು ಮಾಡುವುದಕ್ಕೆ ಒಂದು ವಿಶೇಷತೆ ಇದೆ. ತಯಾರು ಮಾಡುವ ಬಗ್ಗೆ ರೈತರಿಗೆ ಸರಿಯಾಗಿ ಗೊತ್ತಿಲ್ಲ. ಎರಡ್ಮೂರು ದಿನದಲ್ಲಿ ಆ ಭಾಗದಲ್ಲಿ ಅಡಿಕೆ ಬೆಳೆಗಾರರಿಗೆ ತರಬೇತಿ ನೀಡುತ್ತೇವೆ ಎಂದು ಹೇಳಿದರು.