ರಾಜ್‌ಕುಮಾರ್-ಪಾರ್ವತಮ್ಮ ಹೃದಯ ಗೆದ್ದ ಆ ಚಿತ್ರ ಯಾವುದು ಗೊತ್ತಾ?

ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಇಬ್ಬರಿಗೂ ಅಚ್ಚುಮೆಚ್ಚಿನ ಚಿತ್ರವಾಗಿದ್ದ ‘ರಾಘವೇಂದ್ರ ಮಹಾತ್ಮೆ’ಯ ಹಿಂದಿನ ಕುತೂಹಲಕರ ಕಥೆ ಇದು. ಅಣ್ಣಾವ್ರ ಸಿನಿ ಪಯಣದಲ್ಲಿ ಪಾರ್ವತಮ್ಮ ಅವರ ಬೆಂಬಲ ಅತ್ಯಂತ ಮಹತ್ವದ ಪಾತ್ರವಹಿಸಿದೆ. ಮಂತ್ರಾಲಯಕ್ಕೆ ಭೇಟಿ ನೀಡಿದ ನಂತರವೇ ರಾಜ್‌ಕುಮಾರ್ ಅವರಿಗೆ ಈ ಮಹತ್ವದ ಚಿತ್ರವನ್ನು ನಿರ್ಮಿಸುವ ಆಲೋಚನೆ ಮೂಡಿತ್ತು.

ರಾಜ್​​ಕುಮಾರ್ ಅವರ ಸಿನಿಮಾಗಳ ಪೈಕಿ ಯಾವ ಸಿನಿಮಾ ಹೆಚ್ಚು ಇಷ್ಟ ಎಂದು ಅವರಿಗೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು, ‘ನನಗೆ ರಾಜ್​​​ಕುಮಾರ್ ಅವರ ಎಲ್ಲ ಸಿನಿಮಾಗಳೂ ಇಷ್ಟ. ಆದರೆ, ಅದರಲ್ಲೂ ರಾಘವೇಂದ್ರ ಮಹಾತ್ಮೆ’ ತುಂಬಾನೇ ಇಷ್ಟ ಎಂದು ಪಾರ್ವತಮ್ಮ ಅವರು ಹೇಳಿಕೊಂಡಿದ್ದರು. ಈ ಚಿತ್ರವು 1966ರಲ್ಲಿ ರಿಲೀಸ್ ಆಯಿತು. ರಾಘವೇಂದ್ರ ಸ್ವಾಮಿ ಬಗ್ಗೆ, ಅವರ ಪವಾಡಗಳ ಬಗ್ಗೆ ಸಿನಿಮಾ ಇತ್ತು.

ಇಲ್ಲೊಂದು ಅಚ್ಚರಿಯ ವಿಷಯ ಇದೆ. ರಾಜ್​​ಕುಮಾರ್ ಅವರ ಪ್ರೀತಿಯ ಸಿನಿಮಾಗಳ ಪೈಕಿ ಮೊದಲ ಸ್ಥಾನ ಇದ್ದಿದ್ದು ‘ರಾಘವೇಂದ್ರ ಮಹಾತ್ಮೆ’ ಚಿತ್ರಕ್ಕೆ. ಈ ಮೊದಲು ಈ ಬಗ್ಗೆ ಮಾತನಾಡಿದ್ದ ರಾಜ್​​ಕುಮಾರ್ ಅವರು, ‘ನನಗೆ ನನ್ನ ವೃತ್ತಿ ಜೀವನದಲ್ಲಿ ಅತಿ ಇಷ್ಟವಾದ ಸಿನಿಮಾ ಎಂದರೆ ರಾಘವೇಂದ್ರ ಮಹಾತ್ಮೆ. ಅದನ್ನು ನೋಡುವಂತೆ ನಾನು ಅಭಿಮಾನಿಗಳ ಬಳಿ ಕೋರುತ್ತೇನೆ. ಮತ್ಯಾವ ಸಿನಿಮಾಗಳನ್ನು ನೋಡಿ ಎಂದು ನಾನು ಪ್ರೇಕ್ಷಕರ ಬಳಿ ಹೇಳಲ್ಲ ಎಂದು ರಾಜ್​​ಕುಮಾರ್ ಈ ಮೊದಲು ಹೇಳಿಕೊಂಡಿದ್ದರು.

ರಾಜ್​​​ಕುಮಾರ್ ಅವರು ಮಂತ್ರಾಲಯಕ್ಕೆ ತೆರಳಿದ್ದರಂತೆ. ಈ ಸಂದರ್ಭದಲ್ಲಿ ಅಲ್ಲಿ ಅವರು ರಾಯರ ಗುಡಿಯಲ್ಲಿ ಮಲಗಿದ್ದರು. ಬೆಳಿಗ್ಗೆ ನೇರವಾಗಿ ಬೆಂಗಳೂರಿಗೆ ಬಂದ ಅವರಿಗೆ ಸಿನಿಮಾ ಮಾಡಬೇಕು ಎಂಬ ಆಲೋಚನೆ ಬಂತು. ಅದನ್ನು ಮಾಡಿಯೇ ಬಿಟ್ಟರು. ಈ ರೀತಿಯಲ್ಲಿ ‘ರಾಘವೇಂದ್ರ ಮಹಾತ್ಮೆ’ ಸಿನಿಮಾ ಮೂಡಿಬಂತು.