ಹೊನ್ನಾವರ ಜ. 28: ಲೋಕದ ಎಲ್ಲ ಕ್ಷೇತ್ರಗಳಲ್ಲಿ ಸಮತೋಲನ ಮತ್ತು ಸಹಯೋಗವಿದ್ದರೆ ಮಾತ್ರ ಸಮಾಜದಲ್ಲಿ, ಮನೆಯಲ್ಲಿ, ಊರಲ್ಲಿ ನೆಮ್ಮದಿ ಸಾಧ್ಯವಿದೆ ಎಂದು ಪರ್ತಗಾಳಿ ಶ್ರೀ ಜೀವೋತ್ತಮ ಮಠಾಧೀಶರಾದ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮಿಗಳು ಹೇಳಿದ್ದಾರೆ. ಅವರು ನಗರದ ಲಕ್ಷ್ಮೀ ನಾರಾಯಣ ಸಹಕಾರಿ ಗೃಹ ಸಮೂಹಗಳ ವಜ್ರ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು.

ಎಲ್ಲರೂ ಶಿಕ್ಷಣ, ಉದ್ಯೋಗ ಎಂದು ಶಹರ ಸೇರಿ ಅಲ್ಲಿಯೇ ಉಳಿದರೆ ಗ್ರಾಮಾಂತರ ಭಾಗವನ್ನು ಅಭಿವೃದ್ಧಿಪಡಿಸುವವರು ಇರುವುದಿಲ್ಲ. ಅನಿವಾರ್ಯವಾಗಿ ಶಿಕ್ಷಣಕ್ಕೆ ಹೊರಗೆ ಹೋದರೂ ಮರಳಿ ಬಂದು ತನ್ನ ಹಳ್ಳಿ, ಊರಿನಲ್ಲಿ ನೆಲೆಸಿ ಸ್ವಂತ ಉದ್ಯೋಗ ಮಾಡಿ ನಾಲ್ಕು ಜನಕ್ಕೆ ಉದ್ಯೋಗ ಕೊಡುವವರಾದರೆ ಹಳ್ಳಿಗಳು ಬೆಳೆಯುತ್ತವೆ, ಪೇಟೆಗಳೂ ಬೆಳೆಯುತ್ತವೆ. ಹಾಗೆಯೇ ಒಂದು ಊರು ಅಥವಾ ಒಂದು ಕೇರಿಯಲ್ಲಿ ವೈದ್ಯ, ವಿಜ್ಞಾನಿ, ಸಮಾಜಸೇವಕ, ವ್ಯಾಪಾರಿ ಎಲ್ಲರೂ ಇದ್ದರೆ ಸಮತೋಲನವಾಗುತ್ತದೆ. ವೈದ್ಯರಿದ್ದ ಊರಿನಲ್ಲಿ ಅನಾರೋಗ್ಯವಾದರೆ ತಕ್ಷಣ ಚಿಕಿತ್ಸೆ ಸಿಕ್ಕಿ ಆತ ಹೆಚ್ಚು ವರ್ಷ ಬದುಕುತ್ತಾನೆ. ಆದ್ದರಿಂದ ಅಭಿವೃದ್ಧಿ, ಬೆಳವಣಿಗೆ ಮತ್ತು ಪರಸ್ಪರ ಸಹಕಾರ ವಿಷಯದಲ್ಲಿ ಸಮತೂಕದ ಅಭಿವೃದ್ಧಿ ಇದ್ದಾಗ ಮಾತ್ರ ಎಲ್ಲರ ನೆಮ್ಮದಿ ಸಾಧ್ಯವಾಗುತ್ತದೆ. ಅಂತಹ ಬೆಳವಣಿಗೆ ಸಮಾಜದಲ್ಲಿ ಆಗಬೇಕೇ ವಿನಃ ಒಂದೊಂದೇ ಭಾಗ ಬೆಳೆದರೆ ಅದು ಸುಂದರವಾಗುವುದಿಲ್ಲ ಎಂದು ಹೇಳಿದ ಶ್ರೀಗಳು ಮನುಷ್ಯ ವಯಕ್ತಿಕವಾಗಿಯೂ ಸಮತೋಲನ ಮನಸ್ಸು ಸಮಾಜಮುಖಿ ಮನಸ್ಸು ಉಳ್ಳವನಾಗಿ ಬದುಕಬೇಕು ಎಂದು ಆಶೀರ್ವದಿಸಿದರು.
ಲಕ್ಷ್ಮೀ ನಾರಾಯಣ ನಗರದ ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷ ತುಳಸಿದಾಸ ಕಾಮತ ಶ್ರೀಗಳ ಪಾದಪೂಜೆ ನೆರವೇರಿಸಿದರು. ಅದೇ ಪ್ರದೇಶದಲ್ಲಿ ಹುಟ್ಟಿ ಬೆಳೆದ ಡಾ. ಅವಿನಾಶ ಪ್ರಭು ಬಾಲ್ಯದ ದಿನಗಳನ್ನು ಸ್ಮರಿಸಿದರು. ಡಾ. ಗೌತಮ ಬಳಕೂರ ಮಾತನಾಡಿ ಊರ ಅಭಿವೃದ್ಧಿಯಲ್ಲಿ ಎಲ್ಲರೂ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಬೇಕು, ಸ್ವಂತ ಊರಿಗೆ ಮರಳಿ ಹಿರಿಯರ ಮತ್ತು ಕಿರಿಯರೊಟ್ಟಿಗೆ ಮೂರು ತಲೆಮಾರು ಒಟ್ಟಾಗಿ ಬದುಕುವ ಸಂತೋಷವನ್ನು ಎಲ್ಲರೂ ಅನುಭವಿಸಬೇಕು ಎಂದು ಹೇಳಿದರು. ಪತ್ರಕರ್ತ ಜಿಯು ಭಟ್ ಮಾತನಾಡಿ ಲಕ್ಷ್ಮೀ ನಾರಾಯಣ ನಗರ ನಿರ್ಮಾಣಕ್ಕೆ ಕಾರಣರಾದ ವಿಷ್ಣು ಬಾಳೇರಿಯವರ ಸೇವೆಯನ್ನು ಸ್ಮರಿಸಿದರು. ರಾಘವ ಬಾಳೇರಿ ಪ್ರಾಸ್ತಾವಿಕ ಮಾತನಾಡಿದರು. ಬಾಬಣ್ಣ ಕಾರ್ಯಕ್ರಮ ನಿರ್ವಹಿಸಿದರು. ಎರಡು ದಿನಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಲಕ್ಷ್ಮೀ ನಾರಾಯಣ ನಗರದ ವಜ್ರಮಹೋತ್ಸವ ಸಂಪನ್ನವಾಯಿತು.

