ಶಿರಸಿ ಎಸಿ ಆಗಿ ಕೆ.ಎ.ಎಸ್ ಅಧಿಕಾರಿ ಚಂದ್ರಶೇಖರ್ ಆರ್.ಜಿ ನೇಮಕ

ಶಿರಸಿ: ಶಿರಸಿ ಉಪವಿಭಾಗಾಧಿಕಾರಿಯಾಗಿ ಕೆ.ಎ.ಎಸ್ ಅಧಿಕಾರಿ ಚಂದ್ರಶೇಖರ್ ಆರ್.ಜಿ ಅವರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಇತ್ತೀಚೆಗೆ ಶಿರಸಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ K.ಕಾವ್ಯರಾಣಿ ಅವರ ವರ್ಗಾವಣೆಯಿಂದ ಈ ಹುದ್ದೆ ತೆರವಾಗಿದ್ದು, ಸರ್ಕಾರದ ಆದೇಶದಂತೆ ಚಂದ್ರಶೇಖರ್ ಆರ್.ಜಿ ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು.

ಸರ್ಕಾರದ ಆದೇಶದಂತೆ ಇಂದು ಶಿರಸಿಗೆ ಆಗಮಿಸಿದ ಚಂದ್ರಶೇಖರ್ ಆರ್.ಜಿ ಅವರು, ಬೆಳಗ್ಗೆ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅಧಿಕೃತವಾಗಿ ಕಡತಗಳಿಗೆ ಸಹಿ ಹಾಕುವ ಮೂಲಕ ನೂತನ ಜವಾಬ್ದಾರಿಯನ್ನು ವಹಿಸಿಕೊಂಡರು. ಚಂದ್ರಶೇಖರ್ ಆರ್.ಜಿ ಅವರು ಈ ಹಿಂದೆ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದು, ‘ಭೂಮಿ ಉಸ್ತುವಾರಿ ಕೋಶ’ ದಲ್ಲಿ ವಿಶೇಷ ಜಿಲ್ಲಾಧಿಕಾರಿಯಾಗಿ ಹಾಗೂ ಭೂ ಸ್ವಾಧೀನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ನೂತನ ಉಪವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸ್ಪಂದಿಸುವ ಆಡಳಿತ ನೀಡುವುದಾಗಿ ಅವರು ತಿಳಿಸಿದರು.