ಉತ್ತರ ಕನ್ನಡಕ್ಕೆ ಮತ್ತೆ ಎರಗಿದ ಮಂಗನಕಾಯಿಲೆ

ಹೊನ್ನಾವರ ಜ. 08: ನಿರೀಕ್ಷೆಗಿಂತ ಮೊದಲೇ ಈ ವರ್ಷ ಜೀವ ಹಿಂಡುವ ಮಂಗನಕಾಯಿಲೆ ಎರಗಿದೆ. ಹೊನ್ನಾವರ ಸಾಲ್ಕೋಡಿನ ಯುವಕನೊಬ್ಬ ತಾಲೂಕಾಸ್ಪತ್ರೆಗೆ ದಾಖಲಾಗಿದ್ದಾನೆ. ಸಿದ್ಧಾಪುರ ಹೇರೂರಿನ 80 ವರ್ಷದ ವೃದ್ಧೆಯೊಬ್ಬಳು ಶಿರಸಿ ಪಂಡಿತ ಆಸ್ಪತ್ರೆಗೆ ದಾಖಲಾಗಿದ್ದಾರೆ. 2 ವರ್ಷಗಳ ಹಿಂದೆ ಆರೋಗ್ಯ ಸಚಿವರು ಭರವಸೆ ಕೊಟ್ಟಂತೆ ಈ ವರ್ಷ ಮಂಗನಕಾಯಿಲೆಗೆ ವ್ಯಾಕ್ಸಿನ್ ಸಿದ್ಧವಾಗಿಲ್ಲ. ಈಗ ಇನ್ನೆರಡು ವರ್ಷ ಬೇಕು ಎಂದು ಹೇಳುತ್ತಿದ್ದಾರೆ. 35-40 ವರ್ಷಗಳಿಂದ ಮಲೆನಾಡನ್ನು ಕಾಡುತ್ತ ಪ್ರತಿವರ್ಷ ಸಾವಿರಾರು ಜನರನ್ನು ನರಳಿಸಿ ನೂರಾರು ಸಾವಿಗೆ ಕಾರಣವಾಗುವ ಮಂಗನಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಸರ್ಕಾರ ಇದನ್ನು ಪರಿಣಾಮಕಾರಿಯಾಗಿ ತಡೆಯಲು ಈವರೆಗೆ ಯತ್ನಿಸಿಲ್ಲ.

ಡಿಸೆಂಬರ್ ತಿಂಗಳಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಸೇರಿ 12 ಜನರಿಗೆ ಮಂಗನಕಾಯಿಲೆ ತಗುಲಿದೆ. ಉತ್ತರಕನ್ನಡದ ಇಬ್ಬರು ಸೇರಿದರೆ ಒಟ್ಟಿಗೆ 14 ಜನರಿಗೆ ಮಂಗನಕಾಯಿಲೆ ಬಂದಿದ್ದು ವ್ಯಾಪಕ ಪ್ರದೇಶದಲ್ಲಿ ಇದು ಗುರುತಿಸಲ್ಪಟ್ಟಿದೆ. ಮಳೆಗಾಲ ಮುಗಿಯುವವರೆಗೆ ಇನ್ನು 5 ತಿಂಗಳು ಇದು ಮಲೆನಾಡನ್ನು ಕಾಡಲಿದೆ. ಮಂಗನಕಾಯಿಲೆ ಇಲಾಖೆ ಮುನ್ನಚ್ಚರಿಕೆಯ ಕ್ರಮ ಕೈಗೊಂಡು ಕೈಗೆ, ಮೈಗೆ ಹಚ್ಚಲು ತೈಲ ಕೊಟ್ಟಿದೆ. ಕಾಳಜಿಯನ್ನು ಮನೆ ಮನೆಗೆ ಮುಟ್ಟಿಸಿದೆ. ಶೇ. 90ರಷ್ಟು ಜನ ಅರಣ್ಯ ಆವೃತ ಪ್ರದೇಶದಲ್ಲಿರುವುದರಿಂದ ಮಂಗನಿಂದ ಬರುವ ಈ ಕಾಯಿಲೆಗೆ ನಿರ್ದಿಷ್ಟ ಔಷಧ ಇಲ್ಲ. ಸಾರ್ವಜನಿಕರು ಹೆಚ್ಚು ಕಾಳಜಿ ವಹಿಸಿ ಸರ್ಕಾರದ ಕ್ರಮ ಪರಿಣಾಮಕಾರಿಯಾಗುವಂತೆ ಸಹಕರಿಸಬೇಕೆಂದು ಜಿಲ್ಲಾ ಮಂಗನಕಾಯಿಲೆ ವೈದ್ಯಾಧಿಕಾರಿ ಡಾ. ಸತೀಶ ಶೇಟ್ ಕೇಳಿಕೊಂಡಿದ್ದಾರೆ.

ಈವರೆಗೆ ಮಂಗನಕಾಯಿಲೆ ಗುರುತಿಸಲು ಶಿವಮೊಗ್ಗದಲ್ಲಿ ಒಂದೇ ಪ್ರಯೋಗಾಲಯವಿತ್ತು. ಈ ವರ್ಷ ಶಿರಸಿಗೆ ಒಂದು ಮಂಜೂರಾಗಿದ್ದು ಕಾರ್ಯಾರಂಭ ಮಾಡಬೇಕಿದೆ. ಮಂಗನಕಾಯಿಲೆ ಪೀಡಿತರಿಗೆ ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ಮತ್ತು ಗಂಭೀರ ಪರಿಸ್ಥಿತಿಯಲ್ಲಿದ್ದವರಿಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ಆದಷ್ಟು ಬೇಗ ಪರಿಣಾಮಕಾರಿಯಾದ ಲಸಿಕೆ ಮತ್ತು ಔಷಧಗಳನ್ನು ಸರ್ಕಾರ ಒದಗಿಸಬೇಕೆಂಬುದು ಜನರ ಬೇಡಿಕೆಯಾಗಿದೆ.