ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET 25)ಯ ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನವೆಂಬರ್ 29ರಿಂದ ಡಿಸೆಂಬರ್ 6ರವರೆಗೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಹೇಳಿದ್ದಾರೆ.

ಪರಿಶೀಲನೆ ಪ್ರತಿದಿನ ಬೆಳಿಗ್ಗೆ 9:30ರಿಂದ ಮಲ್ಲೇಶ್ವರದ ಕೆಇಎ ಕಚೇರಿಯಲ್ಲಿ ನಡೆಯಲಿದ್ದು, ಒಂದೊಂದು ವಿಷಯಕ್ಕೆ ಒಂದೊಂದು ದಿನ ನಿಗದಿ ಮಾಡಲಾಗಿದೆ. ನಿಗದಿತ ದಿನದಂದು ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಸಮೇತ ಹಾಜರಾಗಬೇಕು ಎಂದು ಸಲಹೆ ನೀಡಲಾಗಿದೆ.
ನಿಗದಿತ ದಿನಾಂಕಕ್ಕೆ ಬರಲು ಸಾಧ್ಯವಾಗದವರು ಡಿಸೆಂಬರ್ 8 ಮತ್ತು 9ರಂದು ಪರಿಶೀಲನೆ ಮಾಡಿಸಿಕೊಳ್ಳಬಹುದು. ಆ ದಿನ ಪರಿಶಿಷ್ಟ ಜಾತಿಯ ಎ, ಬಿ, ಸಿ ವರ್ಗಗಳ ಅಭ್ಯರ್ಥಿಗಳೂ ತಮ್ಮ ಮೂಲ ದಾಖಲೆಗಳೊಂದಿಗೆ ಹಾಜರಾಗಬಹುದು.
ಅರ್ಹತೆಗಾಗಿ ಕ್ಲೇಮ್ ಮಾಡಿದ ಮಾಹಿತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನೂ ತರಬೇಕು. ಸ್ನಾತಕೋತ್ತರ ಪದವಿ ಪೂರ್ಣಗೊಳಿಸದವರು ಪರಿಶೀಲನೆಗೆ ಬರುವ ಅಗತ್ಯ ಇಲ್ಲ. ಹೆಚ್ಚಿನ ಮಾಹಿತಿ ಮತ್ತು ವಿವರವಾದ ವೇಳಾಪಟ್ಟಿಗಾಗಿ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಬೇಕೆಂದು ತಿಳಿಸಿದ್ದಾರೆ.
