ಮಂಗಳೂರು/ಉಡುಪಿ: ಶ್ರೀ ಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಇನ್ನೇನು ಕ್ಷಣಗಳಲ್ಲಿ ಭೇಟಿ ನೀಡಲಿದ್ದಾರೆ. ಮಂಗಳೂರು ಏರ್‌ಪೋರ್ಟ್ ನಿಂದ ಸೇನಾ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಆಗಮಿಸಿದ ಪ್ರಧಾನಿಗಳು, ನಗರದಲ್ಲಿ ರೋಡ್ ಶೋ ಪ್ರಾರಂಭಿಸಿದ್ದಾರೆ.

ಬೆಳಿಗ್ಗೆ 11:05ರ ಸುಮಾರಿಗೆ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಧಾನಿ ಮೋದಿ ಅವರಿಗೆ ರಾಜ್ಯ ಸರ್ಕಾರದ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ವಾಗತ ಕೋರಿದರು. ಈ ವೇಳೆ ಶಾಸಕರಾದ ರಾಜೇಶ್ ನಾಯಕ್, ಭಾಗೀರತಿ ಮೂರ್ಯ, ಗ್ರೇಟರ್ ಬೆಂಗಳೂರು ಆಯುಕ್ತ ಮಹೇಶ್ವರ ರಾವ್, ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಹಾಗೂ ಹಲವರು ಉಪಸ್ಥಿತರಿದ್ದರು.
ಉಡುಪಿ ನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿ, ರೋಡ್ ಶೋ ಆರಂಭಿಸಿದರು. ಬೆಳಗ್ಗಿನಿಂದಲೇ ಪ್ರಧಾನಿಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಜನರು ಪುಷ್ಪವೃಷ್ಟಿ ಮಾಡಿ ಸಂಭ್ರಮ ವ್ಯಕ್ತಪಡಿಸಿದರು. ಯಾರನ್ನೂ ನಿರಾಶೆಪಡಿಸದೆ, ಪ್ರಧಾನಿ ಮೋದಿ ಜನರತ್ತ ಕೈಬೀಸಿ ನಗೆ ಬೀರಿ ಸ್ವಾಗತಕ್ಕೆ ಪ್ರತಿಕ್ರಿಯಿಸಿದರು.
