ಬೆಳಗಾವಿಯಲ್ಲಿ 31 ಕೃಷ್ಣಮೃಗಗಳ ದಾರುಣ ಸಾವಿಗೆ HS ಬ್ಯಾಕ್ಟೀರಿಯಾ ಕಾರಣ: ಪರೀಕ್ಷೆ ದೃಢಪಡಿಸಿದೆ

ಬೆಳಗಾವಿ: ತಾಲೂಕಿನ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 31 ಕೃಷ್ಣಮೃಗಗಳ ದಾರುಣ ಸಾವಿಗೆ ಹೆಚ್‌ಎಸ್ (ಹಿಮೋರೆಜಿಕ್ ಸೆಪ್ಟಿಸೆಮೀಯಾ) ಬ್ಯಾಕ್ಟೀರಿಯಾ ಕಾರಣವೆಂದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಸಾಂಕ್ರಾಮಿಕ ರೋಗವೇ ಸಾವಿಗೆ ಕಾರಣ ಎಂದು ಮೃಗಾಲಯದ ಎಸಿಎಫ್ ನಾಗರಾಜ್ ಬಾಳೆಹೊಸೂರ್ ತಿಳಿಸಿದ್ದಾರೆ.

ಅಕ್ಟೋಬರ್ 13 ರಿಂದ 16ರವರೆಗೆ ಒಟ್ಟು 31 ಕೃಷ್ಣಮೃಗಗಳು ಮೃತಪಟ್ಟಿದ್ದು, ಪ್ರಕರಣ ಗಂಭೀರವಾಗಿದ್ದರಿಂದ ಬನ್ನೇರುಘಟ್ಟ, ಬೆಂಗಳೂರಿನ ತಜ್ಞ ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವೈರಾಣು ತಜ್ಞ ಡಾ. ಚಂದ್ರಶೇಖರ ಅವರು ಸಲ್ಲಿಸಿದ ವರದಿಯಲ್ಲೂ HS ಬ್ಯಾಕ್ಟೀರಿಯಾ ಸೋಂಕೇ ಮುಖ್ಯ ಕಾರಣ ಎಂದು ಸ್ಪಷ್ಟಪಡಿಸಲಾಗಿದೆ.

ಅದೇ ವೇಳೆ, ಹಠಾತ್ ತಾಪಮಾನ ಕುಸಿತ ಮತ್ತು ಒತ್ತಡದ ಪರಿಸ್ಥಿತಿಗಳೂ ಮೃಗಗಳ ಸಾವಿಗೆ ಪೂರಕ ಕಾರಣಗಳಾಗಿರಬಹುದೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಳಿದ ಏಳು ಕೃಷ್ಣಮೃಗಗಳ ಆರೋಗ್ಯದಲ್ಲಿ ಈಗ ಚೇತರಿಕೆ ಕಾಣಿಸುತ್ತಿದ್ದು, ಅವುಗಳಿಗೆ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಮತ್ತಷ್ಟು ಹರಡುವುದನ್ನು ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಜ್ಞರು ಮೃಗಾಲಯಕ್ಕೆ ಸೂಚಿಸಿದ್ದಾರೆ. ಮೃಗಾಲಯದಲ್ಲಿ ಹುಲಿ, ಸಿಂಹ, ಚಿರತೆ, ಕತ್ತೆಕಿರುಬ, ಕರಡಿ ಸೇರಿದಂತೆ ವಿವಿಧ ಜಿಂಕೆ ಜಾತಿಯ ಪ್ರಾಣಿಗಳು ಇದ್ದು, ತುರ್ತು ಪ್ರೋಟೋಕಾಲ್ ಜಾರಿಗೊಳಿಸಲು ಸೂಚನೆ ನೀಡಲಾಗಿದೆ.