ಚಳಿ ತಡೆಯದೆ ನಿದ್ದೆ ಬರ್ತಿಲ್ಲ; ಬೆಡ್‌ಶೀಟ್ ನೀಡುವಂತೆ ಕೋರ್ಟ್‌ನಲ್ಲಿ ದರ್ಶನ್ ಮನವಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ಚಳಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಬೆಡ್‌ಶೀಟ್ ನೀಡಬೇಕೆಂದು ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ. “ಚಳಿ ತಡೆಯೋಕೆ ಆಗುತ್ತಿಲ್ಲ, ನಿದ್ದೆಯೇ ಬರ್ತಿಲ್ಲ. ಬೆಡ್‌ಶೀಟ್ ಕೊಡಿಸುವಂತೆ ವಿನಂತಿ,” ಎಂದು ಅವರು ಜಡ್ಜ್ ಮುಂದೆ ಹೇಳಿದರು.

ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್, ಪವಿತ್ರ ಗೌಡ ಹಾಗೂ ಇನ್ನಿತರ ಆರೋಪಿಗಳು ಟ್ರಯಲ್ ಪ್ರಕ್ರಿಯೆಗೆ ಹಾಜರಾಗಿದ್ದರು. ಈ ವೇಳೆ ಆರೋಪಿ ನಾಗರಾಜ್ ಮೊದಲು ಮಾತು ಪ್ರಾರಂಭಿಸಿ, “ಸ್ವಾಮಿ, ಬೆಡ್‌ಶೀಟ್ ಕೊಡಿಸಿ. ಕೊಡ್ತಿಲ್ಲ. ಮನೆಯಿಂದ ತಂದುಕೊಟ್ಟರೂ ಕೊಡೋದಕ್ಕೆ ಬಿಡ್ತಿಲ್ಲ,” ಎಂದು ಅಳಲನ್ನು ವ್ಯಕ್ತಪಡಿಸಿದರು.

ಅದನ್ನು ಮುಂದುವರಿಸಿ ದರ್ಶನ್ ಮೈಕ್ ಹಿಡಿದು, “ಇದು ನನ್ನೊಬ್ಬರ ಸಮಸ್ಯೆ ಅಲ್ಲ ಸರ್, ಎಲ್ಲರಿಗೂ ಇದೇ ತೊಂದರೆ. ತುಂಬಾ ಚಳಿ ಇದೆ. ನಿದ್ದೆ ಬರ್ತಿಲ್ಲ. ರಾತ್ರಿಯೆಲ್ಲಾ ಎದ್ದು ಕೂತಿರೋ ಪರಿಸ್ಥಿತಿ. ಮಂಗಳದಲ್ಲಿ ಕುಳಿತು ಕಾಲ ದೂಡ್ತಿದ್ದೇವೆ. ದಯವಿಟ್ಟು ಎಲ್ಲರಿಗೂ ಬೆಡ್‌ಶೀಟ್ ಕೊಡಿಸಿ,” ಎಂದು ಮನವಿ ಮಾಡಿದರು. ಆರೋಪಿಗಳ ಅಳಲನ್ನು ಕೇಳಿದ ನ್ಯಾಯಾಧೀಶರು ಜೈಲಾಧಿಕಾರಿ ಶಂಕರ್ ಮೇಲೆ ಗರಂ ಆದರು.
“ಚಳಿಗಾಲ ಹೆಚ್ಚಾಗಿದೆ, ಬೆಡ್‌ಶೀಟ್ ಕೊಡೋದಕ್ಕೆ ಏನು ತೊಂದರೆ? ಅವರು ಹೇಗೆ ಮಲ್ಕೊಳ್ಳಬೇಕು? ಇದನ್ನೇ ನಾವು ಹೇಳಬೇಕಾ?” ಎಂದು ಪ್ರಶ್ನಿಸಿದರು.

ದರ್ಶನ್ ಮನವಿಯ ಬಳಿಕ ಜೈಲರ್‌ಗೆ ಸೂಚನೆ ನೀಡಿದ ಜಡ್ಜ್, “ಕಾನೂನಿನಲ್ಲಿ ಅವಕಾಶ ಇದ್ರೆ ಕೊಡಿ. ಹೊರಗೆ ಚಳಿ ಎಷ್ಟಿದೆ ಗೊತ್ತಾಗಲ್ವಾ?” ಎಂದು ಜಾಡಿಸಿದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್, ಪವಿತ್ರ ಗೌಡ ಸೇರಿದಂತೆ ಆರು ಮಂದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರೆ, ಉಳಿದ ಆರೋಪಿಗಳು ಸ್ವತಃ ಕೋರ್ಟ್‌ಗೆ ಬಂದಿದ್ದರು. ಸಿಆರ್‌ಪಿಸಿ 292ರ ಅಡಿ ಸಾಕ್ಷಿಗಳ ವಿಚಾರಣೆಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ ಅರ್ಜಿಗೆ, ಪವಿತ್ರ ಗೌಡ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. “ಈ ಹಂತದಲ್ಲಿ ಈ ಅರ್ಜಿ ಸಲ್ಲಿಸುವುದು ಸೂಕ್ತವಲ್ಲ,” ಎಂದು ವಾದಿಸಿದರು. ಡಿ.3ಕ್ಕೆ ಮುಂದಿನ ವಿಚಾರಣೆ ಮುಂದೂಡಿಕೆಯಾಗಿತ್ತು.