ಬೆಂಗಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ‘ವೃಕ್ಷಮಾತೆ’ ಸಾಲುಮರದ ತಿಮ್ಮಕ್ಕ ಅವರು ವಿಧಿವಶರಾಗಿದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆಗೆ ಜ್ಞಾನಭಾರತಿ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

114 ವರ್ಷದ ತಿಮ್ಮಕ್ಕ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಎರಡು ದಿನಗಳ ಹಿಂದೆ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು. ಮಕ್ಕಳಿಲ್ಲದ ತಿಮ್ಮಕ್ಕ ಅವರನ್ನು ಸಾಕುಮಗ ಉಮೇಶ್ ಬಳ್ಳೂರು ನೋಡಿಕೊಳ್ಳುತ್ತಿದ್ದರು.
ಇಂದು ಬೆಳಗ್ಗೆ 8.30ರಿಂದ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶವಿತ್ತು. ರಾಜಕೀಯ ಮುಖಂಡರು, ಚಿತ್ರರಂಗದ ಗಣ್ಯರು ಮತ್ತು ಪರಿಸರ ಪ್ರೇಮಿಗಳು ದರ್ಶನಕ್ಕೆ ಆಗಮಿಸಿದರು. 11 ಗಂಟೆಯ ನಂತರ ಜ್ಞಾನಭಾರತಿ ಕಲಾಗ್ರಾಮದಲ್ಲೇ ಅಂತ್ಯಕ್ರಿಯೆ ನೆರವೇರಲಿದೆ. ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಜಿಲ್ಲಾಧಿಕಾರಿ ಜಗದೀಶ್ ಆದೇಶಿಸಿದ್ದಾರೆ.
ಪರಿಸರ ಸಂರಕ್ಷಣೆಯನ್ನು ಜೀವನದ ಗುರಿಯಾಗಿಟ್ಟ ತಿಮ್ಮಕ್ಕ ಅವರು ಕರ್ನಾಟಕದಾದ್ಯಂತ 8,000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಮಾಗಡಿ ತಾಲೂಕಿನ ಸುಮಾರು 4.5 ಕಿ.ಮೀ.ವರೆಗೆ 385 ಆಲದ ಮರಗಳನ್ನು ನೆಟ್ಟು ಬೆಳೆಸಿದ ಅವರ ಸೇವೆಗೆ ಪದ್ಮಶ್ರೀ ಸೇರಿದಂತೆ ಅನೇಕ ರಾಷ್ಟ್ರೀಯ–ಅಂತಾರಾಷ್ಟ್ರೀಯ ಗೌರವಗಳು ಲಭಿಸಿವೆ. ಅಕ್ಷರಸ್ಥರಲ್ಲದಿದ್ದರೂ, ಮರಗಳನ್ನು ಮಕ್ಕಳಂತೆ ನೋಡಿಕೊಂಡು ಬೆಳೆಸಿದ ಅವರ ಪರಿಸರ ಪ್ರೇಮ ಎಲ್ಲರಿಗೂ ಪ್ರೇರಣೆಯಾಗಿದೆ.
