ಬೆಂಗಳೂರು: ವೃಕ್ಷಮಾತೆ ಎಂದು ಖ್ಯಾತಿ ಪಡೆದ ಸಾಲುಮರದ ತಿಮ್ಮಕ್ಕ ಅವರು ಅಂತಿಮ ಉಸಿರೆಳೆದಿದ್ದಾರೆ. ಬೆಂಗಳೂರಿನ ಜಯನಗರದಲ್ಲಿರುವ ಅಪೋಲೊ ಆಸ್ಪತ್ರೆಗೆ ಉಸಿರಾಟದ ಸಮಸ್ಯೆಯಿಂದ ದಾಖಲಿಸಲಾಗಿದ್ದ ಇವರಿಗೆ, 114ನೇ ವಯಸ್ಸಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನ ಸಂಭವಿಸಿದೆ.

1911ರ ಜೂನ್ 30ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ, ರಸ್ತೆಬದಿಯಲ್ಲಿ ಸಾಲುಗಟ್ಟಲೆ ಮರಗಳನ್ನು ನೆಡುವ ಮೂಲಕ ದೇಶದಾದ್ಯಂತ “ಸಾಲುಮರದ ತಿಮ್ಮಕ್ಕ” ಎಂದು ಪ್ರಸಿದ್ಧರಾದರು. ಗಿಡ–ಮರಗಳನ್ನು ತಮ್ಮ ಮಕ್ಕಳಂತೆಯೇ ಆರೈಕೆ ಮಾಡುತ್ತಿದ್ದ ಅವರು ಪರಿಸರ ರಕ್ಷಣೆಗಾಗಿ ಆದರ್ಶ ವ್ಯಕ್ತಿಯಾಗಿ ಗುರುತಿಸಲ್ಪಟ್ಟಿದ್ದರು.
ತಿಮ್ಮಕ್ಕ ಅವರಿಗೆ 1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ, 1997ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, 2019ರಲ್ಲಿ ಪದ್ಮಶ್ರೀ ಪ್ರಶಸ್ತಿ, ಜೊತೆಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ನಾಡೋಜ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
