ಬೆಂಗಳೂರು, ನವೆಂಬರ್ 12: ನಮ್ಮ ಮೆಟ್ರೋ ಹಳದಿ ಮಾರ್ಗದ ಒಂದು ರೈಲಿನಲ್ಲಿ ತಾಂತ್ರಿಕ ತೊಂದರೆ ಉಂಟಾಗಿರುವುದರಿಂದ ಸಂಚಾರದಲ್ಲಿ ವಿಳಂಬ ಉಂಟಾಗುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಬುಧವಾರ ಬೆಳಗ್ಗೆ ಕಚೇರಿ ಮತ್ತು ಕೆಲಸಕ್ಕೆ ತೆರಳುವ ಸಮಯದಲ್ಲೇ ಈ ತೊಂದರೆ ಎದುರಾದ ಕಾರಣ ಪ್ರಯಾಣಿಕರು ಅನಾನುಕೂಲಕ್ಕೆ ಒಳಗಾಗಿದ್ದಾರೆ.

“ಹಳದಿ ಮಾರ್ಗದ ಒಂದು ರೈಲಿನಲ್ಲಿ ತಾಂತ್ರಿಕ ತೊಂದರೆ ಉಂಟಾಗಿದ್ದು, ರೈಲು ಸಂಚಾರದಲ್ಲಿ ವಿಳಂಬ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣಿಕರ ಮಾಹಿತಿಗಾಗಿ ತಿಳಿಸಲಾಗುತ್ತಿದ್ದು, ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ,” ಎಂದು ಹೇಳಿದ್ದಾರೆ. ಇತ್ತೀಚೆಗೆ ಹಳದಿ ಮಾರ್ಗದಲ್ಲಿ ಐದನೇ ರೈಲು ಸಂಚಾರ ಆರಂಭವಾಗಿದ್ದು, ಪ್ರತಿ 15 ನಿಮಿಷಕ್ಕೊಮ್ಮೆ ರೈಲು ಓಡಾಡುವ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿತ್ತು.
ಆದರೆ, ಇದು ಮೊದಲ ಬಾರಿಗೆ ಅಲ್ಲ — ಕೆಲ ದಿನಗಳ ಹಿಂದೆ ನೇರಳೆ ಮಾರ್ಗದ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ಸಂಚಾರ ವ್ಯತ್ಯಯವಾಗಿತ್ತು. ವಿಜಯನಗರ–ಹೊಸಹಳ್ಳಿ ನಿಲ್ದಾಣಗಳ ನಡುವೆ ರೈಲು ಕೆಟ್ಟು ನಿಂತು ಸಮಸ್ಯೆ ಉಂಟಾಗಿತ್ತು. ನಂತರ ಕೆಟ್ಟ ರೈಲನ್ನು ಚಲ್ಲಘಟ್ಟ ನಿಲ್ದಾಣಕ್ಕೆ ಸ್ಥಳಾಂತರಿಸಿ ಸಂಚಾರ ಪುನರಾರಂಭಿಸಲಾಯಿತು. ಆದರೆ ಪೀಕ್ ಅವರ್ ಸಮಯದಲ್ಲೇ ಈ ತೊಂದರೆ ಉಂಟಾದ ಕಾರಣ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ದೊಡ್ಡ ಗುಂಪು ಕಾಣಿಸಿಕೊಂಡಿತ್ತು.
