ಡೇಟಿಂಗ್ ಆ್ಯಪ್ ನಂಬಿ ರೂ.1.29 ಕೋಟಿಗೂ ಹೆಚ್ಚು ಹಣ ಕಳೆದುಕೊಂಡ ಬೆಂಗಳೂರು ವ್ಯಕ್ತಿ

ಬೆಂಗಳೂರು, ನವೆಂಬರ್ 11: ಸೈಬರ್ ಅಪರಾಧಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಕೋಟಿಗಟ್ಟಲೆ ಹಣ ಕಳೆದುಕೊಳ್ಳುತ್ತಿರುವ ಘಟನೆಗಳು ಮುಂದುವರಿದಿವೆ. ಇತ್ತೀಚಿನ ಘಟನೆಯಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರು ಡೇಟಿಂಗ್ ಆ್ಯಪ್ ನಂಬಿ 1.29 ಕೋಟಿ ರೂಪಾಯಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಉತ್ತರ ಸಿಇಎನ್ (ಸೈಬರ್ ಅಪರಾಧ, ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ) ಘಟಕದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 42 ವರ್ಷದ ಜಗದೀಶ್ ಸಿ ಎಂಬವರು “ಕ್ವಾಕ್ ಕ್ವಾಕ್” ಎಂಬ ಡೇಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಅಪರಿಚಿತರೊಬ್ಬರ ಸಂಪರ್ಕಕ್ಕೆ ಬಂದಿದ್ದರು.

ಆರೋಪಿಗಳು ಮೊದಲು ಜಗದೀಶ್ ಅವರ ವಿಶ್ವಾಸವನ್ನು ಗಳಿಸಿ, ಅಂತರರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ನೀಡುವ ಭರವಸೆ ನೀಡಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು. ಈ ವಂಚನೆ ಜಾಲದಲ್ಲಿ ‘ಮೇಘನಾ ರೆಡ್ಡಿ’ ಎಂಬ ಹೆಸರಿನ ಮಹಿಳೆ ಪ್ರಮುಖ ಪಾತ್ರವಹಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ತನ್ನ ತಂದೆಯ ಹೆಸರಿನಲ್ಲಿ ವೃದ್ಧಾಶ್ರಮ ಸ್ಥಾಪಿಸಲು ಬಯಸುತ್ತಿದ್ದೇನೆಂದು ಹೇಳಿ ಜಗದೀಶ್ ಅವರಿಂದ ಹಣ ಕೇಳಿದ್ದಳು. ನವೆಂಬರ್ 5 ಮತ್ತು 6ರಂದು ಜಗದೀಶ್ ಅವರು RTGS ಹಾಗೂ NEFT ಮುಖಾಂತರ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹1,29,33,253 ವರ್ಗಾಯಿಸಿದ್ದರು. ಆದರೆ ಹಣ ಖಾತೆಗೆ ಸೇರಿದ ತಕ್ಷಣ ಮೇಘನಾ ಸಂಪರ್ಕ ಕಡಿತಗೊಳಿಸಿದ್ದಾಳೆ.

ಹಣ ವಾಪಸ್ ಸಿಗದಿದ್ದರಿಂದ ವಂಚನೆಗೆ ಒಳಗಾದುದನ್ನು ಅರಿತ ಜಗದೀಶ್ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಭಾರತೀಯ ನ್ಯಾಯ ಸಂಹಿತೆ 2023ರ ಪ್ರಕಾರ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಕಳೆದುಹೋದ ಹಣವನ್ನು ಮರುಪಡೆಯಲು ತನಿಖೆ ಮುಂದುವರಿಸಿದ್ದಾರೆ.