ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರು ನವೆಂಬರ್ 21ರಂದು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಒಳಮೀಸಲಾತಿ ಮತ್ತು ಅಲೆಮಾರಿ ಸಮುದಾಯಗಳ ಹಕ್ಕು ಕುರಿತು ನಡೆದ ಸಭೆ ಬಳಿಕ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಆಗ “ಡಿ.ಕೆ.ಶಿವಕುಮಾರ್ ನ.21ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರಂತೆ” ಎಂದು ಕೇಳಿದಾಗ ಸಿಎಂ ಕೋಪದಿಂದ “ಯಾರು ಹೇಳಿದರು? ನಿನಗೆ ಯಾರು ಹೇಳಿದರು? ಯಾವ ಪತ್ರಿಕೆ ಬರೆದಿದೆ? ನಾನು ಎಲ್ಲಾ ಪತ್ರಿಕೆ ಓದುತ್ತೇನೆ, ಎಲ್ಲಿಯೂ ಬಂದಿಲ್ಲ” ಎಂದು ಪ್ರತಿಕ್ರಿಯಿಸಿದರು. ನಂತರ ಪತ್ರಕರ್ತರು ಪತ್ರಿಕೆಯ ಹೆಸರನ್ನು ಹೇಳಿದರೂ, ಸಿಎಂ ಯಾವುದೇ ಉತ್ತರ ನೀಡದೇ ತೆರಳಿದರು.
ಸಭೆಯ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, “ಅಲೆಮಾರಿಗಳ ಮಹಾ ಒಕ್ಕೂಟದ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ್ದೇವೆ. ನಾಗಮೋಹನ್ ದಾಸ್ ವರದಿ ಪ್ರಕಾರ ಅಲೆಮಾರಿಗಳಿಗೆ 1% ಮೀಸಲಾತಿ ನೀಡುವ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಪ್ರತ್ಯೇಕ ಅಭಿವೃದ್ಧಿ ನಿಗಮ ಮತ್ತು ಆರ್ಥಿಕ ಪ್ಯಾಕೇಜ್ ನೀಡುವ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಯೋಚಿಸುತ್ತಿದೆ,” ಎಂದರು. ಅಲೆಮಾರಿಗಳ ಒಕ್ಕೂಟದ ಅಧ್ಯಕ್ಷ ಶೇಷಪ್ಪ ಹೇಳಿದ್ದಾರೆ: “ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ನಾವು ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ,” ಎಂದರು.
ಸಾಮಾಜಿಕ ಹೋರಾಟಗಾರ ಶ್ರೀಧರ್ ಅವರು, “1% ಮೀಸಲಾತಿ ನೀಡಲು ಸರ್ಕಾರ ಸ್ವಲ್ಪ ಸಮಯ ಕೇಳಿದೆ. ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನ ಸಮಸ್ಯೆ ಪರಿಹರಿಸಬೇಕು ಎಂದು ನಾವು ಒತ್ತಾಯಿಸಿದ್ದೇವೆ. ಕೇಸ್ ವಾಪಸ್ ಪಡೆಯುವ ವಿಷಯವನ್ನು ಒಕ್ಕೂಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ,” ಎಂದು ಹೇಳಿದರು.


