ಬೆಂಗಳೂರು, ಅಕ್ಟೋಬರ್ 30: ಮುಂಗಾರು ಮುಗಿದು, ಚಂಡಮಾರುತವೂ ಶಾಂತವಾಗಿದೆ. ಈಗ ರಾಜ್ಯದಾದ್ಯಂತ ಬಿಸಿಲು ಪ್ರಾರಂಭವಾಗಿದೆ. ಜೊತೆಗೆ ತಂಪಾದ ಗಾಳಿಯೂ ಬೀಸುತ್ತಿದೆ. ಕೆಲವೇ ಕೆಲವು ಕಡೆಗಳಲ್ಲಿ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಭಾಲ್ಕಿ, ಔರಾದ್, ಹುಮ್ನಾಬಾದ್, ಚಿಂಚೋಳಿ, ಕಮಲಾಪುರ, ತರೀಕೆರೆ, ಮೂಡುಬಿದಿರೆ, ಪೊನ್ನಂಪೇಟೆ, ಗೇರುಸೊಪ್ಪ, ಗುರುಮಿಟ್ಕಲ್, ಮಂಗಳೂರು, ಸೈದಾಪುರ, ಸೇಡಂ, ಉಪ್ಪಿನಂಗಡಿ ಮತ್ತು ವಿರಾಜಪೇಟೆಗಳಲ್ಲಿ ಮಳೆಯಾದ ವರದಿಯಾಗಿದೆ.
ಉಷ್ಣಾಂಶದ ವಿಷಯಕ್ಕೆ ಬಂದರೆ — ಹೊನ್ನಾವರದಲ್ಲಿ 31.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಬೆಳಗಾವಿ ಏರ್‌ಪೋರ್ಟ್‌ನಲ್ಲಿ ಕನಿಷ್ಠ 17.8 ಡಿಗ್ರಿ ಸೆಲ್ಸಿಯಸ್ ತಂಪು ದಾಖಲಾಗಿದೆ.
