ಉತ್ತರ ಪ್ರದೇಶ, ಅಕ್ಟೋಬರ್ 30: ಬಹ್ರೈಚ್ ಜಿಲ್ಲೆಯ ಕೌಡಿಯಾಲ ನದಿಯಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಐದು ಮಕ್ಕಳನ್ನು ಸೇರಿ ಎಂಟು ಮಂದಿ ನಾಪತ್ತೆಯಾಗಿದ್ದಾರೆ. ಘಟನೆಯ ನಂತರ ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದ್ದು, ಪೊಲೀಸರು ಸ್ಥಳೀಯ ಡೈವರ್‌ಗಳ ಸಹಾಯದಿಂದ ಹುಡುಕಾಟ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಉಳಿದವರಿಗಾಗಿ ಶೋಧ ಮುಂದುವರಿದಿದೆ. ಒಟ್ಟು 22 ಜನರನ್ನು ಹೊತ್ತ ದೋಣಿ ಭರತಪುರ ಗ್ರಾಮದಿಂದ ನದಿ ದಾಟುತ್ತಿದ್ದ ವೇಳೆ ಬಲವಾದ ಪ್ರವಾಹಕ್ಕೆ ಸಿಲುಕಿ ಪಲ್ಟಿಯಾಗಿದೆ. ಘಟನೆಯಲ್ಲಿ 60 ವರ್ಷದ ಮಹಿಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಾಕಿ ಪ್ರಯಾಣಿಕರಲ್ಲಿ ಕೆಲವರು ಈಜಿಕೊಂಡು ದಡ ಸೇರಿದ್ದಾರೆ.

ಭರತಪುರ ಗ್ರಾಮದ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿ 22 ಜನರು ನದಿ ಪಕ್ಕದ ಲಖಿಂಪುರ ಖೇರಿ ಜಿಲ್ಲೆಯ ಮಾರುಕಟ್ಟೆಗೆ ತೆರಳಿದ್ದರು. ಈ ಗ್ರಾಮವು ಕತರ್ನಿಯಾ ಘಾಟ್ ವನ್ಯಜೀವಿ ಅಭಯಾರಣ್ಯದ ನದಿಯ ಒಂದು ತೀರದಲ್ಲಿರುವ ದ್ವೀಪದಂತಿರುವ ಪ್ರದೇಶದಲ್ಲಿದೆ. ವಾಪಸ್ಸು ಬರುವಾಗ ದುರಂತ ಸಂಭವಿಸಿದೆ.


