ಬೆಂಗಳೂರು, ಅ.29: ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ ಸಿಕ್ಕಿದೆ. ಆರ್.ವಿ. ರೋಡಿನಿಂದ ಬೊಮ್ಮಸಂದ್ರವರೆಗೆ ಸಾಗುವ ಯೆಲ್ಲೋ ಲೈನ್ ಮಾರ್ಗದಲ್ಲಿ ನವೆಂಬರ್ 1ರಿಂದ ಐದನೇ ರೈಲು ಸಂಚಾರ ಆರಂಭವಾಗಲಿದೆ.

ಪ್ರಸ್ತುತ ನಾಲ್ಕು ರೈಲುಗಳೊಂದಿಗೆ ಸಂಚಾರ ನಡೆಯುತ್ತಿದ್ದು, ಪ್ರತಿ ರೈಲಿನ ಮಧ್ಯೆ ಸುಮಾರು 19 ನಿಮಿಷಗಳ ಅಂತರವಿದೆ. ಹೊಸ ರೈಲು ಸೇರ್ಪಡೆಯಾದರೆ ಅಂತರ ಕೇವಲ 15 ನಿಮಿಷಕ್ಕೆ ಇಳಿಯಲಿದೆ. ಐದನೇ ರೈಲು ಸುರಕ್ಷತಾ ಹಾಗೂ ತಾಂತ್ರಿಕ ಪರೀಕ್ಷೆಗಳ ಅಂತಿಮ ಹಂತದಲ್ಲಿದ್ದು, ನವೆಂಬರ್ 1ರಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.
ಗಮನಾರ್ಹ ವಿಷಯವೆಂದರೆ, ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಯೆಲ್ಲೋ ಲೈನ್‌ಗೆ ಚಾಲನೆ ನೀಡಿದ್ದರು. ಆರಂಭದಲ್ಲಿ ಮೂರು ರೈಲುಗಳೊಂದಿಗೆ ಸಂಚಾರ ಆರಂಭವಾಗಿ, 25 ನಿಮಿಷಕ್ಕೊಮ್ಮೆ ರೈಲು ಓಡುತ್ತಿತ್ತು. ನಂತರ ಸೆಪ್ಟೆಂಬರ್ 10ರಂದು ನಾಲ್ಕನೇ ರೈಲು ಸೇರಿಕೊಂಡು ಅಂತರ 19 ನಿಮಿಷಕ್ಕಿಳಿಯಿತು. ಈಗ ಐದನೇ ರೈಲು ಕಾರ್ಯಾಚರಣೆಗೆ ಸೇರ್ಪಡೆಯಾಗುತ್ತಿರುವುದರಿಂದ, ಪ್ರಯಾಣಿಕರಿಗೆ ಇನ್ನಷ್ಟು ವೇಗವಾದ ಮತ್ತು ಸುಗಮವಾದ ಸೇವೆ ಲಭ್ಯವಾಗಲಿದೆ.

