ಬೆಂಗಳೂರು, ಅಕ್ಟೋಬರ್ 27: ವಿದೇಶದಲ್ಲಿ ಕುಳಿತು ಬೆಂಗಳೂರಿನ ಖಾಸಗಿ ಫೈನಾನ್ಸ್ ಕಂಪನಿಯ ಅಕೌಂಟ್ ಹ್ಯಾಕ್ ಮಾಡಿ ಸುಮಾರು 49 ಕೋಟಿ ರೂಪಾಯಿ ದೋಚಿದ ಆಘಾತಕಾರಿ ಸೈಬರ್ ಅಪರಾಧ ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ಬೆಳಗಾವಿ ಮೂಲದ ಇಸ್ಮಾಯಿಲ್ ಅತ್ತರ್ ಮತ್ತು ಪಟೇಲ್ ಎಂಬ ಇಬ್ಬರನ್ನು ಬೆಂಗಳೂರು ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವಿದೇಶದಿಂದ ವಿಪಿಎನ್ ನೆಟ್‌ವರ್ಕ್ ಬಳಸಿ ವಿಸ್ಡಮ್ ಫೈನಾನ್ಸ್ ಕಂಪನಿಯ ಬ್ಯಾಂಕ್ ಖಾತೆಗಳಿಗೆ ನುಗ್ಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಘಟನೆ ಆಗಸ್ಟ್ 7ರಂದು ಮಾರತಹಳ್ಳಿಯಲ್ಲಿರುವ ವಿಸ್ಡಮ್ ಫೈನಾನ್ಸ್ ಕಂಪನಿಯಲ್ಲಿ ನಡೆದಿದೆ. ಕಂಪನಿಯ ಮ್ಯಾನೇಜರ್ ಪ್ರಕಾಶ್ ಅವರು ಆಗಸ್ಟ್ 9ರಂದು ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಆ ಆಧಾರದ ಮೇಲೆ ಸಿಸಿಬಿ ಸೈಬರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತನಿಖೆಯ ವೇಳೆ, ಆರೋಪಿಗಳು ದೋಚಿದ ಹಣವನ್ನು 653 ನಕಲಿ ಬ್ಯಾಂಕ್ ಖಾತೆಗಳಿಗೆ ಟ್ರಾನ್ಸ್‌ಫರ್ ಮಾಡಿರುವುದು ಪತ್ತೆಯಾಗಿದೆ. ವಿಸ್ಡಮ್ ಫೈನಾನ್ಸ್‌ನ ಎರಡು ಬ್ಯಾಂಕ್ ಖಾತೆಗಳು ಹ್ಯಾಕ್ ಆಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಆರೋಪಿಗಳಿಂದ ಹಣದ ಹಾದಿ ಪತ್ತೆಹಚ್ಚುವ ಪ್ರಯತ್ನ ನಡೆಸುತ್ತಿದ್ದಾರೆ ಮತ್ತು ಇತರರ ಕೈವಾಡವಿದೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.



