ಎಸಿಬಿ ಅಧಿಕಾರಿಗಳ ಹೆಸರಲ್ಲಿ 1.5 ಕೋಟಿ ದೋಚಿದ 7 ಮಂದಿ ಕಸ್ಟಡಿಯಲ್ಲಿ!

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಸೋಗಿನಲ್ಲಿ ಪ್ರಾಧ್ಯಾಪಕರ ಮನೆಯಲ್ಲಿ ದರೋಡೆ ನಡೆಸಿದ್ದ ಆರೋಪದಲ್ಲಿ ಏಳು ಮಂದಿಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಪ್ರಾಧ್ಯಾಪಕರ ಮಾಜಿ ಕಾರು ಚಾಲಕ ಕೂಡ ಸೇರಿದ್ದಾರೆ.

ಬಂಧಿತರನ್ನು ತೆಲಂಗಾಣದ ಜಗನ್ ಮಹೋನ್ ಗೌಡ್, ಯಲಹಂಕದ ರಾಜೇಂದ್ರ ಮುನೋತ್, ಶ್ರೀನಗರದ ಕಿರಣ್ ಕುಮಾರ್ ಜೈನ್, ಶ್ರೀರಾಮಪುರದ ಹೇಮಂತ್, ರಾಮಮೂರ್ತಿ ನಗರದ ಶ್ರೀನಿವಾಸ ಗೌಡ, ವಿಜಯನಗರದ ಸಮೀಪದ ಚೋಳರಪಾಳ್ಯದ ಶ್ರೀನಿವಾಸ ದೇವಿಶೆಟ್ಟಿ ಹಾಗೂ ದೊಮ್ಮಲೂರಿನ ಶಂಕರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ₹1.27 ಕೋಟಿ ನಗದು ಮತ್ತು ಎರಡು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಕಟ್ಟಿಗೇನಹಳ್ಳಿಯ ವಿನಾಯಕನಗರದಲ್ಲಿ ಖಾಸಗಿ ಕಾಲೇಜಿನ ಪ್ರಾಧ್ಯಾಪಕ ಗಿರಿರಾಜ್ ಅವರ ಮನೆಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಂತೆ ನಟಿಸಿ ದರೋಡೆಕೋರರು ನುಗ್ಗಿ ಹಣ ದೋಚಿದ್ದರು. ಈ ಘಟನೆ ಕುರಿತು ತನಿಖೆ ಕೈಗೊಂಡ ಇನ್ಸ್‌ಪೆಕ್ಟರ್ ಎಂ.ಎಲ್. ಕೃಷ್ಣಮೂರ್ತಿ ನೇತೃತ್ವದ ತಂಡವು ತಾಂತ್ರಿಕ ಮಾಹಿತಿಯ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಯಶಸ್ವಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.