ಮನೆಗೆ ನುಗ್ಗಿದ ದರೋಡೆಕೋರರಿಗೆ ತಿರುಗೇಟು ನೀಡಿದ ಚನ್ನಗಿರಿಯ ಮಹಿಳೆ!

ದಾವಣಗೆರೆ, ಅಕ್ಟೋಬರ್ 12: ದಾವಣಗೆರೆಯ ಮಹಿಳೆಯೊಬ್ಬರು ಅಪರೂಪದ ಧೈರ್ಯ ಪ್ರದರ್ಶಿಸಿ, ಮನೆಗೆ ನುಗ್ಗಿದ ದರೋಡೆಕೋರರ ವಿರುದ್ಧ ಹೋರಾಡಿ ತಮ್ಮ ಜೀವ ಮತ್ತು ಆಸ್ತಿಯನ್ನು ರಕ್ಷಿಸಿದ್ದಾರೆ. ಚನ್ನಗಿರಿಯ ಚಿರಡೋಣಿ ಕ್ಯಾಂಪಿನ ಸುಮಲತಾ ರೆಡ್ಡಿ ಎಂಬ ಮಹಿಳೆ, ಕತ್ತಿ ಹಿಡಿದು ಬಂದ ದರೋಡೆ ಗ್ಯಾಂಗ್ ಎದುರು ಬೆದರಿಕೆಗೂಳಾಗದೆ ಎದುರಿಸಿದ್ಧಾರೆ.

ಆಗಸ್ಟ್ 14ರಂದು ಸಂಜೆ ಸುಮಲತಾ ತಮ್ಮ ಅತ್ತೆ ವೀರಯಮ್ಮರೊಂದಿಗೆ ಮನೆಯಲ್ಲಿ ಇದ್ದಾಗ, ಕಪ್ಪು ಮಾಸ್ಕ್ ಧರಿಸಿ ಅಡಿಕೆ ಸುಲಿಯುವ ಕತ್ತಿ ಹಿಡಿದು ಬಂದ ದರೋಡೆಕೋರರು ಮನೆಯ ಹಿಂದಿನ ಬಾಗಿಲು ಮೂಲಕ ಒಳನುಗ್ಗಿ ದಾಳಿ ನಡೆಸಿದ್ದರು. ಈ ವೇಳೆ ಸುಮಲತಾ ಧೈರ್ಯದಿಂದ ಹೋರಾಟ ನಡೆಸಿ ದರೋಡೆಕೋರರನ್ನು ತಡೆದರು. ಹೋರಾಟದ ವೇಳೆ ಅವರಿಗೆ ಕೈಯಲ್ಲಿ ಗಾಯಗಳಾಗಿದ್ದು, ಬೆರಳಿಗೆ ಪೆಟ್ಟಾಗಿತ್ತು. ದರೋಡೆಕೋರರು ವೀರಯಮ್ಮ ಮೇಲೂ ದಾಳಿ ನಡೆಸಿ, 110 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಘಟನೆ ಬಳಿಕ, ಎರಡು ತಿಂಗಳ ಕಾಲ ನಡೆದ ತನಿಖೆಯ ನಂತರ ಬಸವಪಟ್ಟಣ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಅವರಿಂದ ₹12.28 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಶ್ರೇಷ್ಠ ಪತ್ತೆ ಕಾರ್ಯಕ್ಕಾಗಿ ದಾವಣಗೆರೆ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ಪೊಲೀಸರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.