ದಾವಣಗೆರೆ, ಜು.08: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಹೊಸ ಕುಂದವಾಡ ಗ್ರಾಮದಲ್ಲಿ ಒಂದೇ ದಿನ ವಿವಿಧ ಕಾರಣಕ್ಕೆ ಏಳು ಜನರು ಮೃತಪಟ್ಟಿದ್ದು, ಅಂತ್ಯಕ್ರಿಯೆಗೆ ಸ್ಮಶಾನವಿಲ್ಲದೆ ಕುಟುಂಬಸ್ಥರು ಪರದಾಡಿದರು. 3,000 ಜನಸಂಖ್ಯೆ ಹೊಂದಿರುವ ಹೊಸ ಕುಂದುವಾಡದಲ್ಲಿ ಸ್ಮಶಾನವಿಲ್ಲ. ಈ ಬಗ್ಗೆ ಜನರು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಹೊಸ ಕುಂದವಾಡ ನಿವಾಸಿಗಳು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಪಾಲಿಕೆ ಆಯುಕ್ತರು, ಅಧಿಕಾರಿಗಳು ಬರುವಂತೆ ಆಗ್ರಹಿಸಿದರು.
ಹೊಸ ಕುಂದವಾಡ ಗ್ರಾಮದಲ್ಲಿ ಇಂದು ಒಂದೇ ದಿನ ಎರಡು ದಿನದ ನವಜಾತ ಶಿಶು ಸೇರಿದಂತೆ 7 ಜನ ಮೃತಪಟ್ಟಿದ್ದಾರೆ. ನಾಲ್ಕು ಜನ ವಯೋಸಹಜದಿಂದ ಸಾವನಪ್ಪಿದ್ದು, ಮೂರು ಜನ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮಾರಿಯಕ್ಕ (70), ಸಂತೋಷ (30), ಈರಮ್ಮ (60), ಸುನಿಲ್ (25), ಶಾಂತಮ್ಮ (65) ಬಿಮಕ್ಕ (70) ಮೃತ ದುರ್ದೈವಿಗಳು.
ಇಲ್ಲಿವರೆಗೂ ಹೊಸ ಕುಂದವಾಡ ಗ್ರಾಮಸ್ಥರು ಪಕ್ಕದ ಹಳೆ ಕುಂದವಾಡ ಊರಿಗೆ ಹೋಗಿ ಶವಸಂಸ್ಕಾರ ಮಾಡುತ್ತಿದ್ದರು. ಆದರೆ, ಇತ್ತಿಚೆಗೆ ಹಬ್ಬದ ವಿಚಾರವಾಗಿ ಎರಡು ಗ್ರಾಮಸ್ಥರ ಮಧ್ಯೆ ಮನಸ್ತಾಪವಾಗಿದೆ. ಮನಸ್ತಾಪ ಹಿನ್ನೆಲೆಯಲ್ಲಿ ಹಳೆ ಕುಂದವಾಡ ಗ್ರಾಮಸ್ಥರು ಶವಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಿಮ್ಮ ಗ್ರಾಮದಲ್ಲಿ ನೀವು ಶವಸಂಸ್ಕಾರ ಮಾಡಿ ಎಂದು ಹೇಳಿದ್ದಾರೆ. ಹೀಗಾಗಿ ಹೊಸ ಕುಂದವಾಡ ಗ್ರಾಮಸ್ಥರು ಶವಸಂಸ್ಕಾರಕ್ಕೆ ಜಾಗವಿಲ್ಲ ಪರದಾಡಿದರು.