ಇಂಡಸ್ಟ್ರಿಯ ಸತ್ಯ ಬಯಲಿಗೆಳೆದ ದೀಪಿಕಾ ಪಡುಕೋಣೆ; 8 ಗಂಟೆಯ ಕೆಲಸದ ನಿಯಮ ಕುರಿತು ಮೌನ ಮುರಿದ ನಟಿ

ಮುಂಬೈ: “ಬಾಲಿವುಡ್ ಡಿಂಪಲ್ ಕ್ವೀನ್” ದೀಪಿಕಾ ಪಡುಕೋಣೆ ಅಮ್ಮನಾದ್ಮೇಲೆ ತಮ್ಮ ಕೆಲಸದ ಮಾದರಿಯಲ್ಲಿ ಬದಲಾವಣೆ ತಂದಿದ್ದಾರೆ. ಸಿನಿಮಾ ಒಪ್ಪಿಕೊಳ್ಳುವ ಮೊದಲು ಕೆಲ ನಿಯಮಗಳನ್ನು ಅನುಸರಿಸಲು ಆರಂಭಿಸಿದ್ದ ದೀಪಿಕಾ, ದಿನಕ್ಕೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದರು. ಈ ಹೇಳಿಕೆಯ ಕಾರಣದಿಂದಲೇ ದೀಪಿಕಾ ದಕ್ಷಿಣ ಭಾರತದ ಎರಡು ದೊಡ್ಡ ಚಿತ್ರಗಳು — ಸಂದೀಪ್ ವಂಗಾ ರೆಡ್ಡಿಯ ‘ಸ್ಪಿರಿಟ್’ ಮತ್ತು ಪ್ರಭಾಸ್ ನಟನೆಯ ‘ಕಲ್ಕಿ 2898 AD’ —ಗಳಿಂದ ಕೈಬಿಟ್ಟಿದ್ದಾರೆ ಎನ್ನಲಾಗಿತ್ತು.

ಇದೀಗ ಈ ವಿಷಯದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ದೀಪಿಕಾ ಪಡುಕೋಣೆ, “ಪುರುಷ ನಟರು ವರ್ಷಗಳಿಂದ ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡುತ್ತಾರೆ, ಆದರೆ ಮಹಿಳೆಯೊಬ್ಬಳು ಅದೇ ಹೇಳಿದರೆ ಅದು ಸುದ್ದಿಯಾಗುತ್ತದೆ! ಇದೇ ಡಬಲ್ ಸ್ಟಾಂಡರ್ಡ್,” ಎಂದು ಟೀಕಿಸಿದ್ದಾರೆ. ಅವರು ಮುಂದುವರಿಸಿ, “ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯನ್ನು ‘ಇಂಡಸ್ಟ್ರಿ’ ಎಂದು ಕರೆಯಲಾಗುತ್ತೆ, ಆದರೆ ಅದು ಇನ್ನೂ ಅಸ್ತವ್ಯಸ್ತವಾಗಿದೆ. ಸರಿಯಾದ ಪಾಳಿಗಳಲ್ಲಿ ಕೆಲಸ ಮಾಡುವ ಸಮಯ ಬಂದಿದೆ,” ಎಂದಿದ್ದಾರೆ.

ಅಮ್ಮನಾದ ನಂತರವೂ 8 ಗಂಟೆ ಪಾಳಿ ಪಾಲಿಸುತ್ತಿರುವ ಅನೇಕ ಮಹಿಳಾ ಕಲಾವಿದರು ಇದ್ದಾರೆ, ಆದರೆ ತಮ್ಮ ವಿಷಯ ಮಾತ್ರ ವಿವಾದವಾಗಿರುವುದಕ್ಕೆ ಅಚ್ಚರಿಯಾಗಿದೆ ಎಂದು ದೀಪಿಕಾ ಹೇಳಿದ್ದಾರೆ. “ನಾನು ಸದಾ ಘನತೆಯಿಂದ ಮತ್ತು ಸದ್ದಿಲ್ಲದೆ ಹೋರಾಟ ಮಾಡುತ್ತೇನೆ,” ಎಂದು ಹೇಳಿದ್ದಾರೆ.