ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ- ಸರ್ಕಾರದ ವಿರುದ್ಧ ಕಿಡಿಕಾರಿದ ಸಂಸದ ಯದುವೀರ್ ಒಡೆಯರ್

ಮೈಸೂರು: ದಸರಾ ಸಂಭ್ರಮ ಮುಗಿದರೂ ನಗರದಲ್ಲಿ ಇನ್ನೂ ಹಬ್ಬದ ಚೈತನ್ಯ ಮುಂದುವರಿದಿದೆ. ಆದರೆ ಕಳೆದ ಎರಡು ದಿನಗಳಲ್ಲಿ ನಡೆದ ಗಂಭೀರ ಘಟನೆಗಳು ಮೈಸೂರಿನ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ. ಸಂಸದ ಯದುವೀರ್ ಒಡೆಯರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ನಂತರ 340 ಕೋಟಿ ರೂ. ಡ್ರಗ್ಸ್ ಪತ್ತೆ – ಈ ಎಲ್ಲವೂ ರಾಜ್ಯದ ಕಾನೂನು ವ್ಯವಸ್ಥೆಯ ದುರ್ಬಲತೆಯ ಸಂಕೇತ,” ಎಂದು ಟೀಕಿಸಿದರು.

“ಅರಮನೆ ಎದುರು ನಡೆದ ಕೊಲೆ ಪ್ರಕರಣ, ಹಾಗೂ ಬಲೂನ್ ಮಾರಾಟ ಮಾಡುವ ಚಿಕ್ಕ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಘಟನೆಗಳು ಮನುಷ್ಯತ್ವವನ್ನೇ ನಾಚಿಸುತ್ತವೆ. ಇವು ಮೈಸೂರಿನ ಭದ್ರತಾ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತವೆ,” ಎಂದರು.

“ಮೈಸೂರು ನನ್ನ ತವರು” ಎಂದು ಚುನಾವಣಾ ಸಮಯದಲ್ಲಿ ಹೇಳಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡ ಸಂಸದ ಯದುವೀರ್, “ತವರೂರಿನಲ್ಲೇ ಶಾಂತಿ ಕಾಪಾಡಲು ಸರ್ಕಾರ ವಿಫಲವಾಗಿದೆ. ಇದು ಸಂಪೂರ್ಣ ನಿರ್ಲಕ್ಷ್ಯ ಮತ್ತು ಅಸಮರ್ಥ ಆಡಳಿತದ ಪ್ರತೀಕ,” ಎಂದು ಆಕ್ರೋಶ ವ್ಯಕ್ತಪಡಿಸಿದರು.