ಚಾಮುಂಡಿ ತಾಯಿಗೆ ಮುಡಿ ಉತ್ಸವ; ರಾಜವಂಶದ ವಜ್ರ–ವೈಡೂರ್ಯ ಆಭರಣದಲ್ಲಿ ಕಂಗೊಳಿಸಿದ ದೇವಿ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ರಾತ್ರಿ ಅದ್ದೂರಿಯಾಗಿ ತಾಯಿ ಚಾಮುಂಡಿಯ ಮುಡಿ ಉತ್ಸವ ಜರುಗಿತು. ಈ ಹಿನ್ನೆಲೆಯಲ್ಲಿ ಮೈಸೂರು ಮಹಾರಾಜರಿಂದ ದೇವಿಗೆ ಉಡುಗೊರೆಯಾಗಿ ನೀಡಲಾಗಿದ್ದ ವಜ್ರ, ವೈಡೂರ್ಯ ಹಾಗೂ ಇತರ ಅಮೂಲ್ಯ ಆಭರಣಗಳಿಂದ ತಾಯಿಯನ್ನು ಅಲಂಕರಿಸಲಾಯಿತು. ವಜ್ರಾಭರಣಗಳಿಂದ ಕಂಗೊಳಿಸಿದ ಚಾಮುಂಡಿ ತಾಯಿಯ ಉತ್ಸವ ಮೂರ್ತಿ ಭಕ್ತರ ಮನಸೆಳೆಯಿತು.

ದೇವಿಯ ಉತ್ಸವ ಮೂರ್ತಿಗೆ ದೇವಾಲಯದ ಸುತ್ತು ಒಂದು ಸುತ್ತು ಪ್ರದಕ್ಷಣೆ ಮಾಡಿಸಿದ ನಂತರ, ಭಕ್ತರ ಹರ್ಷೋದ್ಗಾರಗಳ ನಡುವೆ ಮಹಾಮಂಗಳಾರತಿ ನೆರವೇರಿಸಲಾಯಿತು. ಮುಡಿ ಉತ್ಸವದಂದು ವರ್ಷಕ್ಕೆ ಒಮ್ಮೆ ಮಾತ್ರ ಈ ರೀತಿಯಾಗಿ ಚಾಮುಂಡಿ ತಾಯಿಗೆ ಎಲ್ಲಾ ಆಭರಣಗಳನ್ನು ಧರಿಸಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.