ಬೆಂಗಳೂರು (ಅ.10): ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ ದಾಖಲಾಗಿದೆ. 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರವು 1,860 ರೂ. ಕಡಿಮೆಯಾಗಿದ್ದು, ಬೆಂಗಳೂರಿನಲ್ಲಿ ಈಗ ಇದರ ಬೆಲೆ ರೂ. 1,22,290ಕ್ಕೆ ಇಳಿದಿದೆ. ಕಳೆದ ಕೆಲವು ತಿಂಗಳುಗಳಿಂದ ವೇಗವಾಗಿ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಕುಸಿತ ಕಂಡುಬರುವುದು ಇದೇ ಮೊದಲ ಬಾರಿಗೆ. ಆಭರಣ ಚಿನ್ನದ ಬೆಲೆಯೂ 10 ಗ್ರಾಂಗೆ ರೂ. 1,700 ಇಳಿಕೆಯಾಗಿ ರೂ. 1,12,100ಕ್ಕೆ ತಲುಪಿದೆ.

ಇತ್ತೀಚೆಗೆ ಚಿನ್ನದ ದರವು ರೂ. 1 ಲಕ್ಷದ ಗಡಿ ದಾಟಿ ರೂ. 1.24 ಲಕ್ಷದ ಸಾರ್ವಕಾಲಿಕ ದಾಖಲೆ ಮಾಡಿದರೂ, ಇದೀಗ ಈ ಭಾರೀ ಇಳಿಕೆ ಖರೀದಿದಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಬಹುತೇಕರು ಚಿನ್ನವನ್ನು ಆಸ್ತಿ ರೂಪದಲ್ಲಿ ಪರಿಗಣಿಸುತ್ತಿರುವುದರಿಂದ ಅದರ ಬೇಡಿಕೆ ಹೆಚ್ಚಾಗಿತ್ತು. ಆದರೆ ಒಂದೇ ದಿನದಲ್ಲಿ ಇಷ್ಟು ಕುಸಿತಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಸಾಮಾನ್ಯವಾಗಿ ಚಿನ್ನದ ದರ ಭಾರತೀಯ ಷೇರುಮಾರುಕಟ್ಟೆಯ ಚಲನೆಗೆ ಅವಲಂಬಿತವಾಗಿದ್ದು, ಅಮೆರಿಕಾದ ತೆರಿಗೆ ನೀತಿ ಮತ್ತು ಜಾಗತಿಕ ಮಾರುಕಟ್ಟೆಯ ಅಸ್ಥಿರತೆಯೂ ದರದ ಏರಿಳಿತಕ್ಕೆ ಕಾರಣವಾಗುತ್ತವೆ.
