ಬೆಂಗಳೂರು: ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ 10 ಕೆಜಿ ಅಕ್ಕಿಗೆ ಬದಲಾಗಿ, ಈಗ 5 ಕೆಜಿ ಅಕ್ಕಿ ಮತ್ತು ‘ಇಂದಿರಾ ಆಹಾರ ಕಿಟ್’ ನೀಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ನಿರ್ಧರಿಸಿದೆ.

‘ಇಂದಿರಾ ಆಹಾರ ಕಿಟ್’ (ಇಂದಿರಾ – ಅನ್ನಭಾಗ್ಯ ಫಲಾನುಭವಿಗಳನ್ನು ಪುನರುಜ್ಜೀವನಗೊಳಿಸಲು ಸಮಗ್ರ ಪೋಷಣೆ ಮತ್ತು ಆಹಾರ ಉಪಕ್ರಮ) ಯೋಜನೆಯಡಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿಯ ಜೊತೆಗೆ, ತೊಗರಿ ಬೇಳೆ, ಹೆಸರು ಕಾಳು, ಸಕ್ಕರೆ, ಉಪ್ಪು ತಲಾ 1 ಕೆಜಿ ಹಾಗೂ 1 ಲೀಟರ್ ಅಡುಗೆ ಎಣ್ಣೆ ನೀಡಲಾಗುತ್ತದೆ.

ಸಚಿವ ಹೆಚ್.ಕೆ. ಪಾಟೀಲ್ ಅವರ ಪ್ರಕಾರ, ಅನ್ನಭಾಗ್ಯ ಯೋಜನೆಯ ಅಕ್ಕಿ ದುರ್ಬಳಕೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆಜಿ ಅಕ್ಕಿಗೆ ಮೀಸಲಿಟ್ಟ ರೂ. 6,426 ಕೋಟಿಗಳಲ್ಲಿ, ರೂ. 6,119.52 ಕೋಟಿಯನ್ನು ‘ಇಂದಿರಾ ಆಹಾರ ಕಿಟ್’ ಯೋಜನೆಗೆ ಮರುಹಂಚಿಕೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ.
