ಭಟ್ಕಳ: ತಾಲೂಕಿನ ರೇಲ್ವೇ ನಿಲ್ದಾಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡುವ ಬಾವಿಗೆ ಪಕ್ಕದಲ್ಲಿಯೇ ಕಸ, ತ್ಯಾಜ್ಯದ ಗುಂಡಿ ನಿರ್ಮಾಣವಾಗಿದ್ದು, ಅಲ್ಲಿಂದ ಮಲೀನ ನೀರು ಕುಡಿಯುವ ನೀರಿನ ಬಾವಿಯನ್ನು ಸೇರಿಕೊಳ್ಳುವ ಆತಂಕ ಎದುರಾಗಿದೆ.
ಬಾವಿಗೆ ಸಮೀಪದಲ್ಲಿಯೇ ಕಸ, ತ್ಯಾಜ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಅಲ್ಲಿ ಜನರು ಕಾಲು ಇಡ ಹೇಸಿಗೆ ಪಡುವಂತಾಗಿದೆ. ಅಲ್ಲಿಯೇ ಕೆಲವು ಪದಾರ್ಥಗಳು ಕೊಳೆತ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು, ಹುಳುಗಳು ಸೃಷ್ಟಿಯಾಗಿವೆ. ಒಮ್ಮೊಮ್ಮೆ ಜಾನುವಾರು, ಬೀದಿ ನಾಯಿ ಅಲ್ಲಿಯೇ ಸತ್ತು ಬಿದ್ದು, ಕೊಳೆತು ಹೋದರೂ 2 ದಿನಗಳ ನಂತರವೇ ವಿಲೇವಾರಿ ಮಾಡಲಾಗುತ್ತದೆ.
ಮಳೆಯ ನೀರು ಕಸ, ತ್ಯಾಜ್ಯಗಳ ಗುಂಡಿಯಲ್ಲಿ ತುಂಬಿಕೊಂಡು ಅಲ್ಲಿಯೇ ಇಂಗಿ ಪಕ್ಕದ ಬಾವಿಯನ್ನು ಸೇರಿಕೊಳ್ಳುತ್ತಿದೆ. ಇದೇ ಬಾವಿಯ ನೀರನ್ನು ರೇಲ್ವೇ ನಿಲ್ದಾಣದ ಎಲ್ಲ ಕುಡಿಯುವ ನೀರು ಸರಬರಾಜು ಘಟಕಗಳಿಗೆ ಒದಗಿಸಲಾಗುತ್ತಿದ್ದು, ಬಹಳಷ್ಟು ಪ್ರಯಾಣಿಕರು ಈ ನೀರನ್ನೇ ಬಾಟಲಿಗೆ ತುಂಬಿಸಿಕೊಂಡು ಹೋಗುತ್ತಾರೆ. ಮಲಿನ ನೀರು ಸೇವಿಸುವ ಜನರ ಆರೋಗ್ಯದ ಗತಿ ಏನು.? ಎಂದು ಬಗ್ಗೆ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.