ಎಲ್‌ಪಿಜಿ ತುಂಬಿದ್ದ ಟ್ರಕ್‌ಗೆ ಟ್ಯಾಂಕರ್ ಡಿಕ್ಕಿ – ಸಿಲಿಂಡರ್‌ಗಳ ಸರಣಿ ಸ್ಫೋಟ

ಜೈಪುರ: ಎಲ್‌ಪಿಜಿ ಸಿಲಿಂಡರ್‌ಗಳಿಂದ ತುಂಬಿದ್ದ ಟ್ರಕ್‌ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಭಾರೀ ಸ್ಫೋಟ ಸಂಭವಿಸಿರುವ ಘಟನೆ ಜೈಪುರ–ಅಜ್ಮೀರ್ ಹೆದ್ದಾರಿಯಲ್ಲಿ ನಡೆದಿದೆ. ಸ್ಫೋಟದ ತೀವ್ರತೆಗೆ ಏಳು ವಾಹನಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಟ್ರಕ್ ಚಾಲಕ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಊಟಕ್ಕೆ ಹೋಟೆಲ್‌ಗೆ ತೆರಳಿದ್ದ ವೇಳೆ, ತಿರುವು ಪಡೆಯುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಹಿಂಬದಿಯಿಂದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡು, ನಂತರ ಗ್ಯಾಸ್ ಸಿಲಿಂಡರ್‌ಗಳು ಸರಣಿಯಾಗಿ ಸ್ಫೋಟಗೊಂಡಿವೆ.

ಸ್ಫೋಟದ ಸದ್ದು ಕಿಲೋಮೀಟರ್‌ಗಳಷ್ಟು ದೂರಕ್ಕೂ ಕೇಳಿ, ಬೆಂಕಿಯ ಜ್ವಾಲೆ ಹತ್ತು ಕಿ.ಮೀ ದೂರವರೆಗೂ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.