ಪ್ರಸಿದ್ಧ ದೇಗುಲಗಳ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದು ವಂಚನೆ: ತೆಲಂಗಾಣದಲ್ಲಿ ಇಬ್ಬರ ಬಂಧನ

ಚಿಕ್ಕಮಗಳೂರು, ಸೆಪ್ಟೆಂಬರ್ 30: ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿದಂತೆ ಕರ್ನಾಟಕದ ಪ್ರತಿಷ್ಠಿತ ದೇವಾಲಯಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ಭಕ್ತರಿಂದ ಕೋಟ್ಯಂತರ ರೂ. ವಂಚಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣ ಮೂಲದ ಸುದೀಪ್ ಮತ್ತು ಅನಿಲ್ ಕುಮಾರ್ ಅವರು Www.Devaseva.com ಎಂಬ ನಕಲಿ ವೆಬ್‌ಸೈಟ್‌ ಮೂಲಕ ವಿಶೇಷ ಪೂಜೆ, ಪ್ರಸಾದ, ಸೇವೆಗಳ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚಿಸುತ್ತಿದ್ದಾರೆ.

ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ನಿರಂತರ ದೂರುಗಳು ಬಂದಿದ್ದು, ದೇವಾಲಯದ ಉಪವ್ಯವಸ್ಥಾಪಕ ರಾಘವೇಂದ್ರ ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತೀವ್ರತೆಯನ್ನು ಗಮನಿಸಿ, ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಪೋಲಿಸರು ತನಿಖೆ ಮುಂದುವರೆಸುತ್ತಿರುವುದಾಗಿ ತಿಳಿಸಿದ್ದು, ಭಕ್ತರನ್ನು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡುತ್ತಿದ್ದಾರೆ.