ಹುಬ್ಬಳ್ಳಿ: ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ಮದುವೆ ಧಾರ್ಮಿಕ ಸಂಘರ್ಷಕ್ಕೆ ತಿರುವು ನೀಡಿದೆ. ಈ ಘಟನೆ ಈಗ ಕಾನೂನು ಹಾದಿ ಹಿಡಿದಿದ್ದು, ಯುವತಿಯ ಪೋಷಕರು ಹಾಗೂ ಹಿಂದೂಪರ ಸಂಘಟನೆಗಳು ಮುಕಳೆಪ್ಪ ವಿರುದ್ಧ ಕಾನೂನು ಹೋರಾಟ ಆರಂಭಿಸಿವೆ. ಮತ್ತೊಂದೆಡೆ, ಯುವತಿ ಪೋಷಕರ ವಿರುದ್ಧ ನಿಂತು ಮುಕಳೆಪ್ಪ ಪರ ಧ್ವನಿ ಎತ್ತಿರುವುದರಿಂದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಈ ನಡುವೆ ಲವ್ ಜಿಹಾದ್ ಆರೋಪ, ನಕಲಿ ದಾಖಲೆ ವಿಚಾರ ಕೂಡ ಬೆಳಕಿಗೆ ಬಂದಿದೆ. ಗಾಯತ್ರಿ ಎಂಬ ಯುವತಿಯ ಪೋಷಕರ ದೂರಿನ ಮೇರೆಗೆ ಮುಕಳೆಪ್ಪ ವಿರುದ್ಧ ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣ ದಾಖಲಿಸಲಾಗಿದೆ. ಭಾನುವಾರ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಹಿಂದೂಪರ ಸಂಘಟನೆಗಳ ಬೆಂಬಲದೊಂದಿಗೆ ಗಾಯತ್ರಿಯ ಪೋಷಕರು ದೂರು ನೀಡಿದ್ದರು. ಮುಕಳೆಪ್ಪ ತನ್ನ ಧರ್ಮವನ್ನು ಮರೆಮಾಚಿ, ಗಾಯತ್ರಿಯನ್ನು ತಂಗಿಯಂತೆ ಪರಿಚಯಿಸಿ ವಂಚನೆ ಮಾಡಿದ ಆರೋಪ ಹೊರಿಸಿದ್ದಾರೆ.

