ಬೆಂಗಳೂರು/ಮೈಸೂರು: ನಾಡಹಬ್ಬ ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೂರು ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಅರ್ಜಿಗಳ ವಿಚಾರಣೆ ನಡೆಯಲಿದೆ. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ, ಗಿರೀಶ್ ಕುಮಾರ್ ಹಾಗೂ ಗೌರವ್ ಅವರು ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ನೇತೃತ್ವದ ವಿಭಾಗೀಯ ಪೀಠದಲ್ಲಿ ಈ ಅರ್ಜಿಗಳ ವಿಚಾರಣೆ ನಡೆಸಲಿದೆ.

ದಸರಾ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು, ವೇದ ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆ ಮಾಡುವ ಸಂಪ್ರದಾಯವಿದೆ. ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಭಾನು ಮುಷ್ತಾಕ್ ಅವರ ಆಯ್ಕೆ ಮಾಡಿದ್ದು ಸರ್ಕಾರದ ನಿರ್ಧಾರದಿಂದ ಹಿಂದೂಗಳ ಭಾವನೆಗೆ ಘಾಸಿ ಉಂಟಾಗಿದೆ. ಹೀಗಾಗಿ ಬಾನು ಮುಷ್ತಾಕ್ ರಿಗೆ ನೀಡಿದ ಆಹ್ವಾನ ಹಿಂಪಡೆಯಲು ನಿರ್ದೇಶನ ನೀಡಬೇಕು ಅನ್ನೋದು ಅರ್ಜಿದಾರರ ಮನವಿ ಆಗಿದೆ.

ದಸರಾ ಹಿಂದೂ ಧಾರ್ಮಿಕ ಸಂಪ್ರದಾಯ ಅವಿಭಾಜ್ಯ ಭಾಗವಾಗಿದ್ದು, ಹಿಂದೂ ಆಗಮಿಕ ಪದ್ದತಿ ಪ್ರಕಾರ ಕಟ್ಟುನಿಟ್ಟಾಗಿ ದಸರಾ ಉದ್ಘಾಟನೆ ನಡೆಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಲಾಗಿದೆ.
ಮೂರು ಪ್ರತ್ಯೇಕ ಪಿಐಎಲ್ ಗಳ ಮೂಲಕ ಮನವಿ ಸಲ್ಲಿಸಲಾಗಿದ್ದು, ಇಂದು ಹೈಕೋರ್ಟ್ ನಲ್ಲಿ ದಸರಾ ಉದ್ಘಾಟನೆ ವಿವಾದ ಇತ್ಯರ್ಥವಾಗಲಿದೆ.
