ಹೊಸನಗರದಲ್ಲಿ ದಾರುಣ! ತೆಪ್ಪ ಮಗುಚಿ ಯುವಕ ನೀರುಪಾಲು – 40 ಅಡಿ ಆಳದಲ್ಲಿ ಶವ ಪತ್ತೆ

ಶಿವಮೊಗ್ಗ: ಹೊಳೆ ದಾಟುವ ವೇಳೆ ತೆಪ್ಪ ಮಗುಚಿ ಯುವಕ ಸಾವನ್ನಪ್ಪಿದ ಘಟನೆ ಹೊಸನಗರ ತಾಲ್ಲೂಕಿನ ಹೊಸೂರು (ಸಂಪೆಕಟ್ಟೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಟೋಡಿಯಲ್ಲಿ ನಡೆದಿದೆ.

ಮೃತನನ್ನು ಪೂರ್ಣೇಶ್ (22) ಎಂದು ಗುರುತಿಸ್ಪಟ್ಟಿದ್ದು, ಅದೃಷ್ಟವಶಾತ್ ಜೊತೆಯಲ್ಲಿದ್ದ ಶರತ್ ಮತ್ತು ರಂಜನ್ ಎಂಬ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ‌. ಮುಳುಗು ತಜ್ಞ ಈ‍ಶ್ವರ್‌ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಪೂರ್ಣೇಶ್ ಮೃತದೇಹವನ್ನು ಪತ್ತೆ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಮುಳುಗು ತಜ್ಞ ಈಶ್ವರ್ ಮಲ್ಪೆ, 40 ಅಡಿ ಆಳದ ನೀರಿನಲ್ಲಿ ಈ ಯುವಕನ ಮೃತದೇಹ ದೊರೆತಿದೆ. ದೋಣಿ ತೆಪ್ಪದಲ್ಲಿ ಸಾಗುವಾಗ ಲೈಫ್ ಜಾಕೆಟ್ ಇಟ್ಟುಕೊಳ್ಳುವಂತೆ ಅವರು ಸ್ಥಳೀಯರಲ್ಲಿ ಮನವಿಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯರು, ಕಾಲು ಸಂಕ ನಿರ್ಮಾಣ ಮಾಡುವಂತೆ 20 ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಇಷ್ಟಾದರೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ ಎಂದು ಕಿಡಿಕಾರಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.