ಬೊಮ್ಮನಕಟ್ಟೆ ಬಡಾವಣೆಯ ಕೆರೆ ಏರಿ ಮೇಲೆ ಇತ್ತೀಚೆಗೆ ನಡೆದ ಕೊಲೆ ಪ್ರಕರಣ; ಸಂಬಂಧ ಐವರು ಆರೋಪಿಗಳ  ಬಂಧನ

ಶಿವಮೊಗ್ಗ: ಜೂನ್ 22ರಂದು ಶಿವಮೊಗ್ಗ ಹೊರವಲಯ ಬೊಮ್ಮನಕಟ್ಟೆ ಬಡಾವಣೆಯ ಕೆರೆ ಏರಿ ಮೇಲೆ ಅವಿನಾಶ್ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣ ಸಂಬಂಧ ಐವರು ಆರೋಪಿತರನ್ನು ವಿನೋಬನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರವೀಣ್, ಸುನೀಲ್, ಆನಂದ, ಜಿತೇಂದ್ರ ಹಾಗೂ ಕಿರಣ್ ಬಂಧಿತರು. ಆರೋಪಿಗಳೆಲ್ಲರೂ ಬೊಮ್ಮನಕಟ್ಟೆಯ ನಿವಾಸಿಗಳಾಗಿದ್ದಾರೆ. ಇವರೆಲ್ಲರೂ ಒಂದೇ ಸಮುದಾಯದವರು ಹಾಗೂ ಸ್ನೇಹಿತರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಲೆಯಾದ ಅವಿನಾಶ್ ಆರೋಪಿ ಪ್ರವೀಣನ ಪತ್ನಿ ಜೊತೆ ಫೋನ್​ನಲ್ಲಿ ಮಾತನಾಡುತ್ತಿದ್ದ ಎಂಬ ಆರೋಪ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. ಪ್ರಕರಣದ ಆರೋಪಿಗಳಾದ ಪ್ರವೀಣ ಹಾಗೂ ಜಿತೇಂದ್ರ ಇಬ್ಬರೂ ಅಣ್ಣ-ತಮ್ಮಂದಿರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜೂನ್ 21ರ ರಾತ್ರಿ ಅವಿನಾಶ್​ನನ್ನು ಬೊಮ್ಮನಕಟ್ಟೆ ಮುಖ್ಯ ರಸ್ತೆಯಿಂದ ತಮ್ಮದೇ ಬೈಕ್​ನಲ್ಲಿ ಕರೆದುಕೊಂಡು ಬಂದ ಆರೋಪಿಗಳು, ಕೆರೆ ಏರಿ ಮೇಲೆ ಕುಳಿತು ಮದ್ಯ ಸೇವನೆ ಮಾಡಿದ್ದಾರೆ. ಅವಿನಾಶ್​​ನಿಗೂ ಮದ್ಯಪಾನ ಮಾಡಿಸಿದ್ದಾರೆ. ಈ ವೇಳೆ ಆತನ ಜೊತೆ ಕಿರಿಕ್ ಮಾಡಿಕೊಂಡು ಜಗಳ ತೆಗೆದಿದ್ದಾರೆ. ಬಳಿಕ ತಮ್ಮ ಬಳಿ ಇದ್ದ ಚಾಕುವಿನಿಂದ ಆತನ ಕತ್ತು ಸೀಳಿದ್ದಾರೆ. ಅವಿನಾಶ್ ಬಿದ್ದು ಒದ್ದಾಡುವ ತನಕ ಅಲ್ಲೇ ಇದ್ದು, ನಂತರ ಅಲ್ಲಿಂದ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ವಿನೋಬನಗರ ಠಾಣೆ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.