‘ಪ್ಲಾಸ್ಟಿಕ್ ಡ್ರಮ್​​ನಲ್ಲಿ ಕೊಳೆತ ಶವ ಪತ್ತೆ’

ಲುಧಿಯಾನಾ, ಜೂನ್ 27: ಪ್ಲಾಸ್ಟಿಕ್​ ಡ್ರಮ್​ನಲ್ಲಿ ಕೊಳೆತ ಶವ ಪತ್ತೆಯಾಗಿರುವ ಘಟನೆ ಪಂಜಾಬ್​​ನ ಲುಧಿಯಾನಾದಲ್ಲಿ ನಡೆದಿದೆ. ಡ್ರಮ್​ನೊಳಗೆ ಪ್ಲಾಸ್ಟಿಕ್ ಚೀಲದಲ್ಲಿ ಶವವನ್ನು ಕಟ್ಟಿಡಲಾಗಿತ್ತು. ಆ ವ್ಯಕ್ತಿಯ ಕುತ್ತಿಗೆ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿತ್ತು.ಸುತ್ತಮುತ್ತಲ ಪ್ರದೇಶದಲ್ಲಿ ಕೆಟ್ಟ ವಾಸನೆ ಹರಡಲು ಪ್ರಾರಂಭಿಸಿದ ನಂತರ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎಸ್​ಎಚ್​ಒ ಕುಲ್ವಂತ್ ಕೌರ್ ಮಾಹಿತಿ ನೀಡಿದ್ದು, ಮೃತ ವ್ಯಕ್ತಿ ವಲಸೆ ಕಾರ್ಮಿಕನಂತೆ ಕಾಣುತ್ತಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ, ಆದರೆ ದೇಹ ಸಂಪೂರ್ಣವಾಗಿ ಕೊಳೆತುಹೋಗಿದೆ ಎಂದಿದ್ದಾರೆ. ಮರಣೋತ್ತರ ಪರೀಕ್ಷೆಯಿಂದ ಸಾವಿನ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಅವರು ಹೇಳಿದರು.

ತನಿಖಾ ಅಧಿಕಾರಿಗಳು ಲುಧಿಯಾನದಲ್ಲಿರುವ 42 ಡ್ರಮ್ ತಯಾರಿಕಾ ಘಟಕಗಳ ಪಟ್ಟಿಯನ್ನು ಸಂಗ್ರಹಿಸಿದ್ದಾರೆ. ಮೃತದೇಹ ಪತ್ತೆಯಾಗಿರುವ ಡ್ರಮ್ ಹೊಸದಾಗಿದ್ದು, ಇದು ಪೂರ್ವಯೋಜಿತ ಕೊಲೆಯ ಸಾಧ್ಯತೆಯನ್ನು ಸೂಚಿಸುತ್ತದೆ. ಕೊಲೆಗೆ ಮುನ್ನ ಡ್ರಮ್ ಅನ್ನು ಹೊಸದಾಗಿ ಖರೀದಿಸಲಾಗಿದೆ ಎಂಬ ಅನುಮಾನವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪರಾಧ ಸ್ಥಳದ 5 ಕಿಲೋಮೀಟರ್ ವ್ಯಾಪ್ತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸ್ಕ್ಯಾನ್ ಮಾಡಲು ಪ್ರಾರಂಭಿಸಿದ್ದಾರೆ. ನಗರದ ಕ್ಯಾಮೆರಾಗಳು, ರೈಲು ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಪೊಲೀಸರು ಮಾರ್ಗವನ್ನು ಟ್ರ್ಯಾಕ್ ಮಾಡುತ್ತಿದ್ದಾರೆ ಮತ್ತು ಹಲವಾರು ಅನುಮಾನಾಸ್ಪದ ವಾಹನ ನೋಂದಣಿ ಸಂಖ್ಯೆಗಳನ್ನು ಪರಿಶೀಲಿಸುತ್ತಿದ್ದಾರೆ.

ಹಲವು ಡ್ರಮ್ ಕಂಪನಿಗಳನ್ನು ಪ್ರಶ್ನಿಸಲಾಗುತ್ತಿದೆ. ಅಪರಾಧ ನಡೆದ ಸ್ಥಳದ ಸುತ್ತಮುತ್ತ ಹೆಚ್ಚಿನ ಸಂಖ್ಯೆಯ ವಲಸಿಗರು ವಾಸಿಸುತ್ತಿದ್ದಾರೆ, ಮತ್ತು ನಾವು ಅವರನ್ನೂ ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಸ್‌ಎಚ್‌ಒ ಕುಲ್ವಂತ್ ಕೌರ್ ಹೇಳಿದರು.