ಕಠ್ಮಂಡು: ಸೋಷಿಯಲ್ ಮೀಡಿಯಾ ಬ್ಯಾನ್‌ನಿಂದಾಗಿ ಶುರುವಾದ ದಂಗೆಯ ಬೆನ್ನಲ್ಲೇ ರಾಜೀನಾಮೆ ನೀಡಿರುವ ನೇಪಾಳದ ಪ್ರಧಾನಿ ಓಲಿ ಸ್ಥಾನಕ್ಕೆ ಇದೀಗ ಕರ್ನಾಟಕದ ಎಂಟೆಕ್ ಪದವೀಧರನಾಗಿರುವ ರ‍್ಯಾಪರ್ ಬಲೇನ್ ಶಾ ಹೆಸರು ಜೋರಾಗಿ ಕೇಳಿ ಬರುತ್ತಿದೆ.

ನೇಪಾಳದಲ್ಲಿ ಹೊಸತಲೆಮಾರಿನ ಯುವಜನ ದಂಗೆ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 9ರಂದು ಪ್ರಧಾನಿ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದರು. ಇದರ ಬೆನ್ನಲ್ಲೇ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಟೆಕ್ ಪದವೀಧರರು ಪ್ರಧಾನಿ ಸ್ಥಾನಕ್ಕೆ ರೇಸ್‌ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ.
ಸದ್ಯ ನೇಪಾಳದ ರಾಜಧಾನಿ ಕಠ್ಮಂಡುವಿನ ಮೇಯರ್ ಆಗಿರುವ ಬಲೇನ್ ಅಲಿಯಾಸ್ ಬಲೇಂದ್ರಗೆ ಯುವಜನರ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಯುವಜನರ ಆಶೋತ್ತರ ಈಡೇರಿಸಲು ಮುಂದಿನ ಪ್ರಧಾನಿ ಬಲೇನ್ ಅವರೇ ಆಗಬೇಕು, ಸೂಕ್ತ ಅಭ್ಯರ್ಥಿ ಎಂಬ ಒತ್ತಾಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಲ್ಲದೇ , ಸಂಸದೆ ಸುಮನಾ ಶ್ರೇಷ್ಠರ ಹೆಸರು ಸಹ ಪ್ರಧಾನಿ ಪಟ್ಟದ ರೇಸ್‌ನಲ್ಲಿ ಮುನ್ನೆಲೆಗೆ ಬಂದಿದೆ.
ಸದ್ಯ 35 ವರ್ಷದ ಬಲೇಂದ್ರ ಅವರ ಪರವಾಗಿ ಆನ್‌ಲೈನ್‌ನಲ್ಲಿ ದೇಶಾದ್ಯಂತ ದೊಡ್ಡಮಟ್ಟದ ಕ್ಯಾಂಪೇನ್ ನಡೆಯುತ್ತಿದೆ. ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಯುವಜನರು ತಮ್ಮ ಆಶೋತ್ತರ ಹಕ್ಕುಗಳ ಈಡೇರಿಕೆಗೆ ಯುವ ಮುಖವೊಂದು ದೇಶದ ಪ್ರಧಾನಿ ಸ್ಥಾನದಲ್ಲಿ ಕಾಣಬೇಕೆಂದು ಬಲವಾಗಿ ಒತ್ತಾಯಿಸುತ್ತಿದ್ದಾರೆ.

