ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೀಲಲಿಗೆಯಲ್ಲಿರುವ ಆಯಿಲ್ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ವಿಶಾಲ್ ಟ್ರೈಬೊಟೆಕ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದ ಆಯಿಲ್ ಬ್ಯಾರೆಲ್‌ಗಳನ್ನು ಶೇಖರಿಸಲಾಗಿತ್ತು. ಏಕಾಏಕಿ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಇಡೀ ಕಾರ್ಖಾನೆಯನ್ನು ಆವರಿಸಿದೆ. ಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಕಳೆದ ಐದು ಗಂಟೆಗಳಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಈ ಘಟನೆದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಸಾಮಾನ್ಯವಾಗಿ ಕಾರ್ಖಾನೆಯಲ್ಲಿ ಸುಮಾರು 40 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ಇಂದು ಭಾನುವಾರವಾದ್ದರಿಂದ ರಜೆ ಇತ್ತು. ಹೀಗಾಗಿ ಅಗ್ನಿ ಅವಘಡದ ಸಮಯದಲ್ಲಿ ಕಾರ್ಮಿಕರು ಇಲ್ಲದಿದ್ದರಿಂದ ದೊಡ್ಡ ದುರಂತ ತಪ್ಪಿದಂತಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
