ಜಪಾನ್, ಸೆಪ್ಟೆಂಬರ್ 07: ಜಪಾನ್ ಪ್ರಧಾನಿ ಶಿಗೆರು ಇಶಿಬಾ ಅಕಸ್ಮಾತ್ ರಾಜೀನಾಮೆ ನೀಡಿದ್ದು, ದೇಶದ ರಾಜಕೀಯದಲ್ಲಿ ಹೊಸ ತಿರುವು ಉಂಟುಮಾಡಿದೆ. ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದಲ್ಲಿ ಉಂಟಾದ ಭಿನ್ನಾಭಿಪ್ರಾಯ ಹಾಗೂ ಆಂತರಿಕ ಒತ್ತಡದಿಂದ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಜಪಾನ್ ರಾಜಕೀಯದಲ್ಲಿ ಅಸ್ಥಿರತೆ ಹೆಚ್ಚಾಗಿದ್ದು, ಕಳೆದ ಐದು ವರ್ಷಗಳಲ್ಲಿ ಯಾವುದೇ ಪ್ರಧಾನಿ ದೀರ್ಘಾವಧಿ ಅಧಿಕಾರದಲ್ಲಿ ಉಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ.

ಜುಲೈನಲ್ಲಿ ನಡೆದ ಚುನಾವಣೆಯಲ್ಲಿ ಶಿಗೆರು ಇಶಿಬಾ ನೇತೃತ್ವದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಒಕ್ಕೂಟವು ಮೇಲ್ಮನೆಯಲ್ಲಿ ಬಹುಮತ ಕಳೆದುಕೊಂಡಿತ್ತು. ಈ ಸೋಲಿನ ನಂತರ ಪಕ್ಷದೊಳಗೆ ಟೀಕೆಗಳು ಹೆಚ್ಚಾಗಿದ್ದು, ಹಲವಾರು ಹಿರಿಯ ನಾಯಕರು ಇಶಿಬಾ ಅವರ ರಾಜಕೀಯ ಜವಾಬ್ದಾರಿಯನ್ನು ಪ್ರಶ್ನಿಸಿದ್ದರು. ಜಪಾನ್‌ನ ಟಿವಿ ವರದಿಗಳ ಪ್ರಕಾರ, ಪಕ್ಷದ ಒತ್ತಡ ಮತ್ತು ಆಂತರಿಕ ವಿರೋಧದ ನಡುವೆ ಇಶಿಬಾ ಅವರು ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಶಿಬಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಆದಾಗ್ಯೂ, ಕಳೆದ ಒಂದು ತಿಂಗಳಿನಿಂದ, ಅವರು ಪಕ್ಷದ ಬಲಪಂಥೀಯರಿಂದ ರಾಜೀನಾಮೆ ನೀಡುವಂತೆ ಒತ್ತಡವನ್ನು ಎದುರಿಸುತ್ತಿದ್ದರು. ಆದರೆ ಅವರು ಈ ಬೇಡಿಕೆಯನ್ನು ನಿರಂತರವಾಗಿ ವಿರೋಧಿಸುತ್ತಿದ್ದರು.
ರಾಜೀನಾಮೆ ಹಿಂದಿನ ನಿಜವಾದ ಕಾರಣವೇನು?
ಇಶಿಬಾ ಅಕ್ಟೋಬರ್‌ನಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಆದರೆ ಜುಲೈನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಅವರ ಪಕ್ಷವು ಹೀನಾಯ ಸೋಲನ್ನು ಅನುಭವಿಸಿತು. 248 ಸ್ಥಾನಗಳ ಮೇಲ್ಮನೆಯಲ್ಲಿ ಬಹುಮತವನ್ನು ಪಡೆಯಲು ವಿಫಲವಾದ ಕಾರಣ ಸರ್ಕಾರದ ಸ್ಥಿರತೆಯನ್ನು ಪ್ರಶ್ನಿಸಲಾಯಿತು. ಈ ಸೋಲಿನ ನಂತರ, ಇಶಿಬಾ ಪಕ್ಷದೊಳಗಿನ ವಿರೋಧಕ್ಕೆ ಗುರಿಯಾಗಿದ್ದಾರೆ. ವಿಶೇಷವಾಗಿ ಬಲಪಂಥೀಯ ಬಣವು ಅವರ ರಾಜೀನಾಮೆಗೆ ನಿರಂತರವಾಗಿ ಒತ್ತಾಯಿಸುತ್ತಿತ್ತು. ಇಲ್ಲಿಯವರೆಗೆ ಅವರು ಒತ್ತಡವನ್ನು ಸಹಿಸಿಕೊಳ್ಳುತ್ತಿದ್ದರು, ಆದರೆ ಅಂತಿಮವಾಗಿ ಅವರು ರಾಜೀನಾಮೆ ನೀಡಲು ನಿರ್ಧರಿಸಿದರು.

