ಚಂಡೀಗಢ: ಸೆಪ್ಟೆಂಬರ್ 9ರಂದು ಪ್ರಧಾನಮಂತ್ರಿ ಮೋದಿ ಪ್ರವಾಹ ಪೀಡಿತ ಪಂಜಾಬ್‌ಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ವಿಪತ್ತು ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ. ಜೊತೆಗೆ, ಮೋದಿ ಭೇಟಿ ವೇಳೆ ಸ್ಥಳೀಯ ಅಭಿವೃದ್ಧಿ ಯೋಜನೆಗಳ ಮೇಲೂ ಗಮನಹರಿಸುವ ನಿರೀಕ್ಷೆಯಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ನಿರಂತರ ಮಳೆಯ ಪರಿಣಾಮದಿಂದ ಪಂಜಾಬ್ ಸೇರಿದಂತೆ ವಿವಿಧ ಪ್ರದೇಶಗಳು ತೀವ್ರ ಹಾನಿಗೆ ಒಳಗಾಗಿವೆ. ಈ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನ ಗುರುದಾಸ್ಪುರಕ್ಕೆ ಭೇಟಿ ನೀಡುತ್ತಿದ್ದು, ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸಲಿದ್ದಾರೆ. ಇದೇ ವೇಳೆ, ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರ ಕ್ರಮಗಳ ಮೇಲೂ ಅವರು ನೇರವಾಗಿ ಗಮನಹರಿಸಲಿದ್ದಾರೆ.
ಈ ಕುರಿತು ಪಂಜಾಬ್ ಬಿಜೆಪಿ ತನ್ನ ಎಕ್ಸ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದೆ. ಗುರುದಾಸ್ಪುರ ಭೇಟಿಯ ವೇಳೆ ಪ್ರಧಾನಮಂತ್ರಿ ಮೋದಿ ಅವರು ಪ್ರವಾಹ ಪೀಡಿತರನ್ನು ನೇರವಾಗಿ ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದೆ. ಇದೇ ವೇಳೆ, ಕೇಂದ್ರ ಬಿಜೆಪಿ ಸರ್ಕಾರ ಯಾವಾಗಲೂ ಪಂಜಾಬ್ ಜನರ ಬೆಂಬಲದಲ್ಲಿದೆ ಮತ್ತು ಸಂಕಷ್ಟದ ಸಂದರ್ಭದಲ್ಲಿ ಸಹಾಯಕ್ಕೆ ನಿಂತಿದೆ ಎಂಬುದನ್ನು ಈ ಭೇಟಿ ಮತ್ತೊಮ್ಮೆ ಸಾಬೀತುಪಡಿಸುತ್ತದೆ ಎಂದು ಪಕ್ಷದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ಪಂಜಾಬ್ ರಾಜ್ಯಕ್ಕೆ ವಿಶೇಷ ಪರಿಹಾರ ಪ್ಯಾಕೇಜ್‌ನ್ನು ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಧಾರಾಕಾರ ಮಳೆಯಿಂದಾಗಿ ಉಂಟಾದ ಪ್ರವಾಹವು ಪಂಜಾಬ್‌ನ 14 ಜಿಲ್ಲೆಗಳಲ್ಲಿ ತೀವ್ರಹಾನಿಯನ್ನುಂಟು ಮಾಡಿದೆ. ಈವರೆಗೂ 46 ಜನರು ಸಾವನ್ನಪ್ಪಿದ್ದು, ಸುಮಾರು 2,000 ಗ್ರಾಮಗಳು ಮುಳುಗಡೆಯಾಗಿವೆ. ಇನ್ನೂ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯದಲ್ಲಿ ನಿರಂತರ ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ.

