Asia Cup 2025: ಭಾರತ ತಂಡದ ಫಿನಿಶರ್​ RCB ಆಟಗಾರ..!

ಏಷ್ಯಾಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನಕ್ಕಾಗಿ ಮುಂದಿನ ವಾರ ಟೀಮ್ ಇಂಡಿಯಾವನ್ನು ಪ್ರಕಟಿಸಲಿದ್ದಾರೆ. 15 ಸದಸ್ಯರ ಈ ತಂಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಜಿತೇಶ್ ಶರ್ಮಾ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಏಷ್ಯಾಕಪ್​ಗಾಗಿ 2ನೇ ವಿಕೆಟ್ ಕೀಪರ್ ಬ್ಯಾಟರ್ ಆಗಿ ಜಿತೇಶ್ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಆಸಕ್ತಿ ತೋರಿದೆ ಎಂದು ಪಿಟಿಐ ವರದಿ ಮಾಡಿದೆ.

ಐಪಿಎಲ್ ಸೀಸನ್-18 ರಲ್ಲಿ ಆರ್​ಸಿಬಿ ಪರ ಫಿನಿಶರ್ ಪಾತ್ರದಲ್ಲಿ ಕಣಕ್ಕಿಳಿದಿದ್ದ ಜಿತೇಶ್ ಶರ್ಮಾ 15 ಪಂದ್ಯಗಳಿಂದ 261 ರನ್ ಕಲೆಹಾಕಿದ್ದರು. ಅದು ಕೂಡ ಕೇವಲ 148 ಎಸೆತಗಳಲ್ಲಿ. ತನ್ನ ಸ್ಫೋಟಕ ಬ್ಯಾಟಿಂಗ್​ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಜಿತೇಶ್ ಶರ್ಮಾ ಪ್ರಮುಖ ಪಾತ್ರವಹಿಸಿದ್ದರು.

ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಜಿತೇಶ್ ಶರ್ಮಾ ಅವರನ್ನು ಟೀಮ್ ಇಂಡಿಯಾದ 2ನೇ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಇನ್ನು ಏಷ್ಯಾಕಪ್​ನಿಂದ ರಿಷಭ್ ಪಂತ್ ಹೊರಗುಳಿಯುವುದು ಖಚಿತವಾಗಿದ್ದು, ಹೀಗಾಗಿ ತಂಡದ ಪ್ರಮುಖ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಕಾಣಿಸಿಕೊಳ್ಳಲಿದ್ದಾರೆ. 

ಅಂದಹಾಗೆ ಜಿತೇಶ್ ಶರ್ಮಾ ಈಗಾಗಲೇ ಟೀಮ್ ಇಂಡಿಯಾ ಪರ 9 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 7 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ಧ ಅವರು 68 ಎಸೆತಗಳಲ್ಲಿ ಒಟ್ಟು 100 ರನ್ ಕಲೆಹಾಕಿದ್ದರು. ಇದೀಗ ಒಂದು ವರ್ಷದ ಬಳಿಕ ಜಿತೇಶ್ ಶರ್ಮಾ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.