ಹೌ ಇಸ್ ದಿ ಜೋಸ್: RCB ಬೌಲರ್​ಗಳನ್ನು ಸದಾ ಬೆಂಡೆತ್ತುವ ಬಟ್ಲರ್

IPL 2025 RCB vs GT: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 39 ಎಸೆತಗಳನ್ನು ಎದುರಿಸಿದ ಜೋಸ್ ಬಟ್ಲರ್ 6 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 73 ರನ್ ಬಾರಿಸಿದ್ದರು. ಈ ಸ್ಪೋಟಕ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು 17.5 ಓವರ್​ಗಳಲ್ಲಿ 170 ರನ್ ಬಾರಿಸಿ 8 ವಿಕೆಟ್​ಗಳ ಜಯ ಸಾಧಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು ಜಯಭೇರಿ ಬಾರಿಸಿದೆ. ಈ ಗೆಲುವಿನ ರೂವಾರಿಗಳೆಂದರೆ ಮೊಹಮ್ಮದ್ ಸಿರಾಜ್ ಹಾಗೂ ಜೋಸ್ ಬಟ್ಲರ್ ಬೌಲಿಂಗ್​ನಲ್ಲಿ ಸಿರಾಜ್ ಪರಾಕ್ರಮ ಮರೆದರೆ ಬ್ಯಾಟಿಂಗ್​ನಲ್ಲಿ ಜೋಸ್ ಬಟ್ಲರ್ ಜೋಶ್ ತೋರಿಸಿದ್ದರು. ವಿಶೇಷ ಎಂದರೆ ಆರ್​ಸಿಬಿ ವಿರುದ್ಧ ಜೋಸ್ ಬಟ್ಲರ್ ಅಬ್ಬರಿಸುತ್ತಿರುವುದು ಇದೇ ಮೊದಲೇನಲ್ಲ.


ಈ ಹಿಂದೆ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್​ಗಳ ಬೆಂಡೆತ್ತಿದ ಇತಿಹಾಸ ಜೋಸ್ ಬಟ್ಲರ್ ಹಿಂದಿದೆ. ಹೀಗೆ ಬೆಂಡೆತ್ತುವ ಮೂಲಕ ಈವರೆಗೆ ಬಟ್ಲರ್ 589 ರನ್​ ಕಲೆಹಾಕಿದ್ದಾರೆ. RCB ವಿರುದ್ಧ ಜೋಸ್ ಬಟ್ಲರ್ ಈವರೆಗೆ 17 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 382 ಎಸೆತಗಳನ್ನು ಎದುರಿಸಿ ಬರೋಬ್ಬರಿ 589 ರನ್ ಬಾರಿಸಿದ್ದಾರೆ. ಅಂದರೆ ಆರ್​ಸಿಬಿ ವಿರುದ್ಧ ಜೋಸ್ ಬಟ್ಲರ್ 53.20ರ ಸರಾಸರಿಯಲ್ಲಿ ರನ್ ಕಲೆಹಾಕುತ್ತಾ ಬಂದಿದ್ದಾರೆ. ಇನ್ನು ಆರ್​ಸಿಬಿ ವಿರುದ್ಧದ 17 ಇನಿಂಗ್ಸ್​ಗಳಲ್ಲಿ ಜೋಸ್ ಬಟ್ಲರ್ 154.18ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಬಟ್ಲರ್ ಬ್ಯಾಟ್​ನಿಂದ ಸಿಡಿದಿರುವ ಸಿಕ್ಸರ್​ಗಳ ಸಂಖ್ಯೆ 32. ಹಾಗೆಯೇ 48 ಫೋರ್​ಗಳನ್ನು ಸಹ ಬಾರಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜೋಸ್ ಬಟ್ಲರ್ ಈವರೆಗೆ 2 ಭರ್ಜರಿ ಶತಕ ಹಾಗೂ 3 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಬ್ಯಾಟರ್​ಗಳಲ್ಲಿ ಒಬ್ಬರಾಗಿ ಜೋಸ್ ಬಟ್ಲರ್ ಕಾಣಿಸಿಕೊಂಡಿದ್ದಾರೆ. ಇನ್ನು ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. ಆರ್​ಸಿಬಿ ವಿರುದ್ಧ 24 ಇನಿಂಗ್ಸ್ ಆಡಿರುವ ವಾರ್ನರ್ 605 ಎಸೆತಗಳನ್ನು ಎದುರಿಸಿ 985 ರನ್ ಬಾರಿಸಿದ್ದಾರೆ.

ಈ ವೇಳೆ ಡೇವಿಡ್ ವಾರ್ನರ್ ಬ್ಯಾಟ್​ನಿಂದ 9 ಅರ್ಧಶತಕಗಳು ಹಾಗೂ 2 ಶತಕಗಳು ಮೂಡಿಬಂದಿವೆ. ಅದರಲ್ಲೂ ಆರ್​ಸಿಬಿ ವಿರುದ್ಧ ಐಪಿಎಲ್​ನಲ್ಲಿ 50 ಕ್ಕಿಂತ ಹೆಚ್ಚು ಸಿಕ್ಸ್ ಸಿಡಿಸಿದ ಏಕೈಕ ಬ್ಯಾಟರ್ ಆಗಿ ಡೇವಿಡ್ ವಾರ್ನರ್ ಗುರುತಿಸಿಕೊಂಡಿದ್ದಾರೆ. ಡೇವಿಡ್ ವಾರ್ನರ್ 24 ಇನಿಂಗ್ಸ್​ಗಳಿಂದ 55 ಸಿಕ್ಸ್ ಸಿಡಿಸಿದರೆ, ಇದೀಗ ಜೋಸ್ ಬಟ್ಲರ್ 32 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಈ ಮೂಲಕ ವಾರ್ನರ್ ಬಳಿಕ ಬಟ್ಲರ್ ಆರ್​ಸಿಬಿ ಬೌಲರ್​ಗಳನ್ನು ಬೆಂಡೆತ್ತುವ ಕಾಯಕಕ್ಕೆ ಕೈಹಾಕಿದ್ದಾರೆ.