ಅಪ್ರಾಪ್ತೆಯ ಹತ್ಯೆ ಪ್ರಕರಣ – ಗಂಡ, ಮಹಿಳೆ ಸೇರಿ ನಾಲ್ವರು ಸೆರೆ

ವಿಜಯನಗರ: ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾದ ಬಳಿಕ ಗಂಡನೇ ಕೊಲೆ ಮಾಡಿರುವ ಘಟನೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಮಹಿಳೆ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಹೊಸಪೇಟೆನಗರದ ನಿವಾಸಿಗಳಾದ ಮಂಜುನಾಥ ಅಲಿಯಾಸ್ ಡಾಲಿ (24), ಈತನ ತಾಯಿ ಲಕ್ಷ್ಮಿ, ಈತನ ಸ್ನೇಹಿತರಾದ ತರುಣ್‌, ಅಕ್ಬರ್‌ ಬಂಧಿತರು.

    ಪ್ರಕರಣದ ವಿವರ: ನಗರದ ಚಪ್ಪರದಹಳ್ಳಿಯ ಬಾಲಕಿ (17)ಯನ್ನು ಪುಸಲಾಯಿಸಿ ಪ್ರೀತಿ ಮಾಡಿ, ದೇವಸ್ಥಾನವೊಂದರಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಮಂಜುನಾಥ ಅಲಿಯಾಸ್ ಡಾಲಿ (24) ಮದುವೆಯಾಗಿದ್ದ. ಬಳಿಕ ತನ್ನ ತಾಯಿ ಲಕ್ಷ್ಮಿ ಜತೆ ಸೇರಿ ಮಾನಸಿಕ, ದೈಹಿಕವಾಗಿ ಹಿಂಸೆ ನೀಡುವುದನ್ನು ಶುರು ಮಾಡಿದ್ದ. ಇತ್ತ ತಂದೆ, ತಾಯಿಗಳ ಆಸರೆ ಇಲ್ಲದೇ ಮನೆ ಬಿಟ್ಟು ಬಂದು ಮದುವೆಯಾಗಿದ್ದ ಅಪ್ರಾಪ್ತೆ ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ಮೊದಲೇ ಕಳ್ಳತನ ಮಾಡುವುದನ್ನು ರೂಢಿ ಮಾಡಿಕೊಂಡಿದ್ದ ಮಂಜುನಾಥ ಅಲಿಯಾಸ್ ಡಾಲಿ ಮನೆಗೆ ಬರುವುದನ್ನು ಬಿಟ್ಟಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಜತೆ ಕುಡಿದು ಬಂದು ಜಗಳ ಮಾಡುತ್ತಿದ್ದ. ಸುಮಾರು ಎರಡು ತಿಂಗಳ ಹಿಂದೆ ಬಾಲಕಿಯನ್ನು ಕೊಲೆ ಮಾಡಿ, ತನ್ನ ಸ್ನೇಹಿತರಾದ ತರುಣ್‌, ಅಕ್ಬರ್‌ ಜೊತೆಗೂಡಿ ಬೈಕ್‌ನಲ್ಲಿ ಬ್ಯಾಗ್‌ವೊಂದರಲ್ಲಿ ಹೆಣ ಸಾಗಿಸಿದ್ದಾನೆ. ತುಂಗಭದ್ರಾ ಜಲಾಶಯ ಸಮೀಪದಲ್ಲಿರುವ ಮುನಿರಾಬಾದ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಸ್ಮಶಾನದಲ್ಲಿ ಮೂವರು ಸೇರಿ ಹೆಣ ಹೂತಿದ್ದಾರೆ. ಬಳಿಕ ಪಾರ್ಟಿ ಕೂಡ ಮಾಡಿದ್ದಾರೆ.

    ಒಬ್ಬ ಆರೋಪಿ ಪಾಪಪ್ರಜ್ಞೆಯಿಂದ ಎರಡು ದಿನದ ಹಿಂದೆ ಬಾಲಕಿಯ ತಂದೆಗೆ ಕೊಲೆಯ ವಿಷಯ ತಿಳಿಸಿದಾಗ, ಕೃತ್ಯ ಬಯಲಾಯಿತು. ಹೂತಿದ್ದ ಸ್ಥಳ ಅಗೆದಾಗ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ವಿಚಾರಣೆ ವೇಳೆ ಆರೋಪಿಗಳು ತಿಳಿಸಿರುವ ಕುರಿತು ಪೊಲೀಸರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

    ವಿಜಯನಗರ ಎಸ್ಪಿ ಅರುಣಾಂಗ್ಷು ಗಿರಿ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್‌ ದೊಡ್ಡಮನಿ, ಪಟ್ಟಣ ಠಾಣೆ ಪಿಐ ಲಖನ್‌ ಮಸಗುಪ್ಪಿ ಮತ್ತು ಕೊಪ್ಪಳ ಗ್ರಾಮಾಂತರ ಠಾಣೆ ಪಿಐ ಸುರೇಶ್‌, ಕೊಪ್ಪಳ ಉಪವಿಭಾಗಾಧಿಕಾರಿ ಮಹೇಶ್‌ ಸ್ಮಶಾನಕ್ಕೆ ತೆರಳಿ ಹೆಣ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕ್ರಮ ಕೈಗೊಂಡಿದ್ದಾರೆ.

    ಈ ಜಾಗಕ್ಕೆ ಆಗಾಗ ಪಾರ್ಟಿ ಮಾಡಲು ಬರುತ್ತಿದ್ದರಿಂದ ಹೆಣವನ್ನು ಇಲ್ಲಿ ಹೂತು ಹಾಕಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನ ಅನ್ವಯ ಪಟ್ಟಣ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೊಲೆ ಪ್ರಕರಣದ ಜತೆಗೆ ಪೋಕ್ಸೋ ಪ್ರಕರಣ ಕೂಡ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.